ಎನ್‌ಆರ್‌ಸಿ ಕೇಂದ್ರದಲ್ಲಿ ಮುಸ್ಲಿಂ ಕುಟುಂಬದ ಮೇಲೆ ಹಲ್ಲೆ: ಮಹಿಳೆಯರಿಗೆ ಕಿರುಕುಳ

Update: 2019-05-31 18:02 GMT

ಗುವಾಹತಿ, ಮೇ 31: ರಾಷ್ಟ್ರೀಯ ಪೌರತ್ವ ನೋಂದಣಿ (ಎನ್‌ಸಿಆರ್) ಪ್ರತಿಪಾದನೆ ಹಾಗೂ ಆಕ್ಷೇಪದ ಆಲಿಕೆ ಕೇಂದ್ರದ ಹೊರಗೆ ದುಷ್ಕರ್ಮಿಗಳ ಗುಂಪೊಂದು ಸ್ಥಳೀಯ ಮುಸ್ಲಿಂ ವ್ಯಕ್ತಿಯೋರ್ವನಿಗೆ ಅಮಾನವೀಯವಾಗಿ ಹಲ್ಲೆ ನಡೆಸಿ, ಕುಟುಂಬದ ಮಹಿಳೆಯರಿಗೆ ಕಿರುಕುಳ ನೀಡಿದ ಘಟನೆ ಇಲ್ಲಿ ನಡೆದಿದೆ.

 ಮಧ್ಯ ಅಸ್ಸಾಂನ ಮೊರಿಗಾಂವ್ ಜಿಲ್ಲೆಯ ಕಾಪಿಲಿಯಲ್ಲಿರುವ ಡೆವಲಪ್‌ಮೆಂಟ್ ಬ್ಲಾಕ್ ಎನ್‌ಆರ್‌ಸಿ ಆಲಿಕೆ ಕೇಂದ್ರದ ಹೊರಭಾಗದಲ್ಲಿ ಮೇ 29ರಂದು ಈ ಘಟನೆ ನಡೆದಿದೆ. ಬರಿಗಾಂವ್‌ನ 50ರ ಹರೆಯದ ಮುಕೀಬುರ್ರಹ್ಮಾನ್ ಅವರ ಮೇಲೆ ಜನರ ಗುಂಪೊಂದು ಅಮಾನವೀಯವಾಗಿ ಹಲ್ಲೆ ನಡೆಸಿದೆ. ಇದರಿಂದ ಅವರ ತಲೆಗೆ ಗಾಯವಾಗಿದ್ದು, ಮೊರಿಗಾಂವ್‌ನ ನಾಗರಿಕ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.

ಈ ಘಟನೆ ಪೊಲೀಸರು ಹಾಗೂ ಭದ್ರತಾ ಸಿಬ್ಬಂದಿ ಎದುರಲ್ಲೇ ನಡೆದಿದೆ. ಆದರೆ, ಆಘಾತಕಾರಿ ವಿಚಾರವೆಂದರೆ, ಇವರೆಲ್ಲರೂ ಮೌನವಾಗಿದ್ದರು. ‘‘ಬಾಾರ್ಪುಜಿಯಾದ ಕಪಿಲಿ ಡೆವಲೆಪ್‌ಮೆಂಟ್ ಬ್ಲಾಕ್‌ನಲ್ಲಿ ಮೇ 29ರಂದು ಎನ್‌ಆರ್‌ಸಿ ಆಲಿಕೆಗೆ ಆಗಮಿಸುವಂತೆ ನಮಗೆ ತಿಳಿಸಲಾಗಿತ್ತು. ನಾವು ಸ್ವಲ್ಪ ಬೇಗನೇ ಅಲ್ಲಿಗೆ ತಲುಪಿದೆವು. ನಾವು ವಾಹನದಿಂದ ಇಳಿಯುತ್ತಿದ್ದಂತೆ ವ್ಯಕ್ತಿಯೋರ್ವ ನಮ್ಮ ಸಮೀಪಕ್ಕೆ ಬಂದು ಪೌರತ್ವದ ದಾಖಲೆಗಳನ್ನು ತೋರಿಸುವಂತೆ ನನಗೆ ಹೇಳಿದೆ. ಎನ್‌ಆರ್‌ಸಿ ಅಧಿಕಾರಿಗಳೊಂದಿಗೆ ಯಾವುದೇ ಸಂಬಂಧ ಇಲ್ಲದ ವ್ಯಕ್ತಿಗೆ ದಾಖಲೆಗಳನ್ನು ತೋರಿಸಲು ನಾನು ನಿರಾಕರಿಸಿದೆ. ಆದರೆ, ಆತ ನನ್ನ ದಾಖಲೆಗಳನ್ನು ಕಸಿಯಲು ಪ್ರಯತ್ನಿಸಿದ. ಅತ ಹಾಗೂ ಆತನ ಜೊತೆಗಿದ್ದವರು ನನ್ನ ಕುತ್ತಿಗೆ ಅಮುಕಿದರು’’ ಎಂದು ಮುಕೀಬುರ್ರಹ್ಮಾನ್‌ನ ಸಹೋದರಿ ರೀಮಾ ಸುಲ್ತಾನ್ ಹೇಳಿದ್ದಾರೆ.

 “ನನ್ನ ಸಹೋದರ ಮುಕಿಬುರ್ರಹ್ಮಾನ್ ಹಾಗೂ ಕುಟುಂಬದ ಇತರ ಸದಸ್ಯರು ನನ್ನನ್ನು ದುಷ್ಕರ್ಮಿಗಳ ಗುಂಪಿನಿಂದ ರಕ್ಷಿಸಲು ಮುಂದೆ ಬಂದಾಗ, ದುಷ್ಕರ್ಮಿಗಳ ಗುಂಪು ಅವರ ಮೇಲೆ ಸುತ್ತಿಗೆ ಹಾಗೂ ಇತರ ಆಯುಧಗಳಿಂದ ದಾಳಿ ನಡೆಸಿತು. ಓರ್ವ ದುಷ್ಕರ್ಮಿ ಮುಕೀಬುರ್ರಹ್ಮಾನ್‌ನ ತಲೆಗೆ ಸುತ್ತಿಗೆಯಿಂದ ಎರಡು ಬಾರಿ ಹೊಡೆದ. ಇದರಿಂದ ತಲೆಗೆ ಗಾಯವಾಗಿ ರಕ್ತ ಸೋರಿತು” ಎಂದು ಸುಲ್ತಾನಾ ಹೇಳಿದ್ದಾರೆ.

  “ದುಷ್ಕರ್ಮಿಗಳ ಗುಂಪು ನನ್ನ ಇನ್ನೋರ್ವ ಸಹೋದರ ರಹ್ಮತ್ ಅಲಿ, ಸಹೋದರಿ ಹಾಗೂ ಸೊಸೆ ಮೇಲೆ ದಾಳಿ ನಡೆಸಿತು. ಅವರು ನೆರವಿಗೆ ಕೂಗಿಕೊಂಡರು. ಆದರೆ, ಪೊಲೀಸರು, ಭದ್ರತಾ ಸಿಬ್ಬಂದಿ ಸಹಿತ ಯಾರೊಬ್ಬರೂ ನಮ್ಮನ್ನು ರಕ್ಷಿಸಲು ಮುಂದೆ ಬರಲಿಲ್ಲ. ಸ್ಥಳದಲ್ಲಿ ಸೇರಿದ ಗುಂಪು ಮುಸ್ಲಿಮರ ವಿರುದ್ಧ ಅವಮಾನಕರ ಹೇಳಿಕೆ ನೀಡಿತು ಹಾಗೂ ತಮ್ಮನ್ನು ಹತ್ಯೆಗೈಯುವುದಾಗಿ ಬೆದರಿಕೆ ಒಡ್ಡಿತ್ತು ಎಂದು ಸುಲ್ತಾನ್ ನೆನಪಿಸಿಕೊಂಡಿದ್ದಾರೆ.

ಈ ಸಂದರ್ಭ ಸಿಟಿಜನ್ ಫಾರ್ ಜಸ್ಟಿಸ್ ಆ್ಯಂಡ್ ಪೀಸ್‌ನ ಸದಸ್ಯರು ನಮ್ಮ ನೆರವಿಗೆ ಬಂದರು. ಅವರು ನಮ್ಮನ್ನು ರಕ್ಷಿಸಿದರು ಎಂದು ಸುಲ್ತಾನ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News