ವಿಶ್ವಕಪ್ ನಲ್ಲಿ ಭಾರತ ಶುಭಾರಂಭ: ಹರಿಣ ಪಡೆಗೆ ಹ್ಯಾಟ್ರಿಕ್ ಸೋಲು

Update: 2019-06-05 17:27 GMT

ಸೌಥಾಂಪ್ಟನ್, ಜೂ.5: ರೋಹಿತ್ ಶರ್ಮಾ ಶತಕದ ಸಹಾಯದಿಂದ ಬುಧವಾರ ಇಲ್ಲಿ ನಡೆದ ವಿಶ್ವಕಪ್ ಕ್ರಿಕೆಟ್ ಟೂರ್ನಿಯ 8ನೇ ಪಂದ್ಯದಲ್ಲಿ ದಕ್ಷಿಣ ಆಫ್ರಿಕ ತಂಡವನ್ನು 6 ವಿಕೆಟ್‌ಗಳಿಂದ ಮಣಿಸಿ, ಭಾರತ ಶುಭಾರಂಭ ಮಾಡಿದೆ.

ಗೆಲ್ಲಲು 228 ರನ್ ಗುರಿ ಪಡೆದ ಭಾರತ 47.3 ಓವರ್‌ಗಳಲ್ಲಿ 4 ವಿಕೆಟ್‌ಗೆ 230 ರನ್ ಗಳಿಸಿತು.•ಭಾರತದ ಪರ ರೋಹಿತ್ ಶರ್ಮಾ 122 ರನ್ ಗಳಿಸಿದರೆ, ಕೆಎಲ್ ರಾಹುಲ್(21) ನಾಯಕ ವಿರಾಟ್ ಕೊಹ್ಲಿ(18), ಎಂ.ಎಸ್ ಧೋನಿ (34) ಹಾರ್ದಿಕ್ ಪಾಂಡ್ಯ (15) ಎರಡಂಕೆಯ ಸ್ಕೋರ್ ಗಳಿಸಿದರು.

ಇದಕ್ಕೂ ಮೊದಲು ಟಾಸ್ ಜಯಿಸಿದ ದಕ್ಷಿಣ ಆಫ್ರಿಕದ ನಾಯಕ ಎಫ್‌ಡು ಪ್ಲೆಸಿಸ್ ಮೊದಲು ಬ್ಯಾಟಿಂಗ್ ಆಯ್ದುಕೊಂಡರು. ಸ್ಪಿನ್ನರ್ ಯಜುವೇಂದ್ರ ಚಹಾಲ್ ನೇತೃತ್ವದ ಭಾರತದ ಶಿಸ್ತುಬದ್ಧ ಬೌಲಿಂಗ್ ದಾಳಿಗೆ ತತ್ತರಿಸಿದ ದಕ್ಷಿಣ ಆಫ್ರಿಕ ತಂಡ 50 ಓವರ್‌ಗಳಲ್ಲಿ 9 ವಿಕೆಟ್‌ಗಳ ನಷ್ಟಕ್ಕೆ 227 ರನ್ ಗಳಿಸಿತ್ತು. ದೊಡ್ಡ ಮೊತ್ತ ಗಳಿಸುವ ಯೋಜನೆ ಹಾಕಿಕೊಂಡಿದ್ದ ದಕ್ಷಿಣ ಆಫ್ರಿಕ 23ನೇ ಓವರ್ ಅಂತ್ಯಕ್ಕೆ 89 ರನ್‌ಗೆ ಪ್ರಮುಖ 5 ವಿಕೆಟ್‌ಗಳನ್ನು ಕಳೆದುಕೊಂಡು ಕಳಪೆ ಆರಂಭ ಪಡೆಯಿತು.

ಆಲ್‌ರೌಂಡ್ ಕ್ರಿಸ್ ಮೊರಿಸ್(42, 34 ಎಸೆತ, 1 ಬೌಂಡರಿ, 2 ಸಿಕ್ಸರ್)ಹಾಗೂ ರಬಾಡ(ಔಟಾಗದೆ 31, 35 ಎಸೆತ, 2 ಬೌಂಡರಿ)ಕೆಳ ಕ್ರಮಾಂಕದಲ್ಲಿ ಒಂದಷ್ಟು ಹೋರಾಟ ನೀಡಿ ತಂಡದ ಮೊತ್ತವನ್ನು 9 ವಿಕೆಟ್ ನಷ್ಟಕ್ಕೆ 227 ರನ್‌ಗೆ ತಲುಪಿಸಿದರು.

ಅಗ್ರ ಕ್ರಮಾಂಕದಲ್ಲಿ ನಾಯಕ ಪ್ಲೆಸಿಸ್(38), ಡೇವಿಡ್ ಮಿಲ್ಲರ್(31, 40 ಎಸೆತ)ತಾಳ್ಮೆಯ ಇನಿಂಗ್ಸ್ ಆಡಿ ತಂಡಕ್ಕೆ ಆಸರೆಯಾದರು. ಫೆಹ್ಲುಕ್ವಾಯೊ(34, 61 ಎಸೆತ)ಎರಡಂಕೆಯ ಸ್ಕೋರ್ ಗಳಿಸಿದರು.

ಭಾರತದ ಪರ ಸ್ಪಿನ್ನರ್ ಚಹಾಲ್(4-51)ಯಶಸ್ವಿ ಬೌಲರ್ ಎನಿಸಿಕೊಂಡರು. ಆಫ್ರಿಕಕ್ಕೆ ಆರಂಭಿಕ ಆಘಾತ ನೀಡಿದ ವೇಗದ ಬೌಲರ್ ಜಸ್‌ಪ್ರೀತ್ ಬುಮ್ರಾ(2-35) ಹಾಗೂ ಕೆಳ ಕ್ರಮಾಂಕದಲ್ಲಿ ಭುವನೇಶ್ವರ ಕುಮಾರ್(2-44) ತಲಾ ಎರಡು ವಿಕೆಟ್ ಪಡೆದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News