ನಾವೆಂದು ಪಾಠ ಕಲಿಯುವುದು?

Update: 2019-06-11 18:22 GMT

ಮಾನ್ಯರೇ,

ಕೊಡಗಿಗೆ ಕೊಡಗೇ ಮುಳುಗಿ ಹೋಗಿದ್ದು ಇತಿಹಾಸದ ಪುಟ ಸೇರುವಷ್ಟು ಹಳತಾಗಿಲ್ಲ. ಬರೀ ಒಂದು ವರ್ಷ. ಮತ್ತೆ ಹಳೆಯ ಕೊಡಗು ನಿರ್ಮಿಸಲು ಕನಿಷ್ಠವೆಂದರೂ ಇಪ್ಪತ್ತು ವರ್ಷಗಳೇ ಬೇಕಾದೀತು. ಅದು ನಮ್ಮ ತಲೆಯನ್ನು ಇನ್ನೂ ಕೊರೆಯಬೇಕಿತ್ತು. ನಮಗೆ ಅದನ್ನು ನೆನಪಿಸಿಕೊಂಡಾಗ ನಮ್ಮ ಬೆನ್ನು ಮೂಳೆಯಲ್ಲಿ ಚಳಿ ಹುಟ್ಟಬೇಕಾಗಿತ್ತು. ಪ್ಲಾಂಟರ್- ಕೂಲಿಗಳೆಂಬ ಭೇದವಿಲ್ಲದೆ, ದಣಿ-ಆಳು ಎಂಬ ಭೇದವಿಲ್ಲದೇ ನಿರಾಶ್ರಿತರ ಪುನರ್ವಸತಿ ಕೇಂದ್ರಗಳಲ್ಲಿ ಯಾರ್ಯಾರೋ ಕೊಡುವ ತುಂಡು ಬಟ್ಟೆಗಾಗಿ ಕೈ ಚಾಚಿದ್ದು, ತಟ್ಟೆ ಹಿಡಿದು ಒಪ್ಪೊತ್ತಿನ ಗಂಜಿಗಾಗಿ ಸರತಿ ಸಾಲಲ್ಲಿ ನಿಂತಿದ್ದು ಇದೆಂದೂ ಮರೆತು ಹೋಗದು ಎಂದೇ ಭಾವಿಸಿದ್ದ ನಮಗೆ ಇದೀಗ ಮತ್ತೆ ನಿರಾಶೆಯಾಗುತ್ತಿದೆ. ನಮ್ಮ ಪ್ರಭುತ್ವ ಕೆಟ್ಟ ಮೇಲೂ ಪಾಠ ಕಲಿಯುವ ಲಕ್ಷಣಗಳು ಕಾಣಿಸುತ್ತಿಲ್ಲ. ಈಗಾಗಲೇ ಅರೆ ಬೋಳಾದ ಕೊಡಗನ್ನು ಮತ್ತೆ ಬೋಳಾಗಿಸುವ ಕೆಲಸ ಭರದಿಂದ ಸಾಗುತ್ತಿದೆ. ಕೊಡಗಿನ ಕೆ.ನಿಡುಗಣೆ ಗ್ರಾಮದಲ್ಲಿ ಉಳ್ಳವರಿಗೆ ರಜಾ ದಿನಗಳಲ್ಲಿ ಬಂದು ಮಜಾ ಮಾಡಲೆಂದು ಬೃಹತ್ ರೆಸಾರ್ಟ್ ನಿರ್ಮಿಸುವ ಸಲುವಾಗಿ ಬರೋಬ್ಬರಿ ಎಂಟು ನೂರ ಎಂಟು ಮರಗಳನ್ನು ಕಡಿಯಲು ಸರಕಾರ ಹಸಿರು ನಿಶಾನೆ ತೋರಿಸಿ ಈಗಾಗಲೇ ನೂರು ಬೃಹತ್ ಮರಗಳನ್ನು ಧರಾಶಾಯಿಯಾಗಿಸಿ ಬಿಟ್ಟಿದೆ.

ಮರ ಕಡಿಯುವ ಕೆಲಸ ಶುರುವಾಗಿ ಈಗಾಗಲೇ ಎರಡು ತಿಂಗಳುಗಳು ಕಳೆದಿವೆ. ಮೂರ್ನಾಲ್ಕು ದಿನಗಳ ಹಿಂದಷ್ಟೇ ಅದು ಬೆಳಕಿಗೆ ಬಂದಿದೆ. ಅವರಲ್ಲಿ ಪ್ರಶ್ನಿಸಿದರೆ ಸಂಬಂಧಿತ ಇಲಾಖೆಯಿಂದ ಪಡೆದ ಅನುಮತಿ ಪತ್ರವನ್ನು ತೋರಿಸುತ್ತಾರೆ..

ಅತಿವೃಷ್ಟಿಯೋ...ಅನಾವೃಷ್ಟಿಯೋ... ಇವೆರಡನ್ನು ತಡೆಯಬಹುದಾದ ಪ್ರಬಲ ಶಕ್ತಿಯಿರುವುದು ಮರಗಳಿಗೆ ಎಂಬ ವಾಸ್ತವ ನಾವು ಮರೆಯದಿರೋಣ. ಮರಗಳು, ಬೆಟ್ಟಗಳು ಭೂಮಿಯನ್ನು ಹಿಡಿದು ನಿಲ್ಲಿಸಿದ ಆಧಾರಸ್ತಂಭಗಳು ಎನ್ನುವುದನ್ನು ಮರೆಯದಿರೋಣ. ಕೊಡಗಿನ ಉಸ್ತುವಾರಿ ಸಚಿವರು, ಅರಣ್ಯ ಸಚಿವರು ಮತ್ತು ಮುಖ್ಯಮಂತ್ರಿಗಳು ಕೂಡಲೇ ಮರಗಳ ಸಂಹಾರವನ್ನು ತಡೆಯಬೇಕೆಂದು ಕೈ ಮುಗಿದು ಕೇಳುತ್ತಿದ್ದೇನೆ. ಈಗಾಗಲೇ ನೀಡಿದ ಅನುಮತಿಯನ್ನು ಜನಹಿತ ದೃಷ್ಟಿಯಿಂದ, ರಾಜ್ಯದ ಹಿತದ ದೃಷ್ಟಿಯಿಂದ ಹಿಂಪಡೆಯಬೇಕು.

Writer - -ಇಸ್ಮತ್ ಪಜೀರ್, ಮಂಗಳೂರು

contributor

Editor - -ಇಸ್ಮತ್ ಪಜೀರ್, ಮಂಗಳೂರು

contributor

Similar News