ಮುಂದಿನ ಮಹಾರಾಷ್ಟ್ರ ಸಿಎಂ ಅಭ್ಯರ್ಥಿಯಾಗಲಿದ್ದಾರೆ ಈ ಯುವ ನಾಯಕ!

Update: 2019-06-14 09:32 GMT

ಮುಂಬೈ, ಜೂ.14: ಈ ವರ್ಷ ನಡೆಯಲಿರುವ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಶಿವಸೇನೆಯ ಮುಖ್ಯಸ್ಥ ಉದ್ಧವ್ ಠಾಕ್ರೆಯವರ ಪುತ್ರ ಆದಿತ್ಯ ಠಾಕ್ರೆಯನ್ನು ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿಸಬೇಕೆಂಬ ಬೇಡಿಕೆಯನ್ನು ಮುಂದಿಡುವ ಸುಳಿವನ್ನು  ಬಿಜೆಪಿಯ ಮಿತ್ರ ಪಕ್ಷವಾಗಿರುವ ಶಿವಸೇನೆ ನೀಡಿದೆ.

ಶಿವಸೇನೆಯ ಯುವ ಘಟಕದ ಮುಖ್ಯಸ್ಥರಾಗಿರುವ ಆದಿತ್ಯ ಠಾಕ್ರೆ ಚುನಾವಣೆ ಸ್ಪರ್ಧಿಸಲು ಉತ್ಸುಕರಾಗಿದ್ದಾರೆಂಬ ವರದಿಗಳ ನಡುವೆಯೇ ಮರಾಠಿ ಸುದ್ದಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ರಾಜ್ಯಸಭಾ ಸಂಸದ ಹಾಗೂ ಪಕ್ಷದ ವಕ್ತಾರ ಸಂಜಯ್ ರಾವತ್ ಈ ಹೇಳಿಕೆ ನೀಡಿದ್ದಾರೆ.

ಆದಿತ್ಯ ಠಾಕ್ರೆ ಈಗಾಗಲೇ ವಿಧಾನಸಭಾ ಚುನಾವಣೆಗೆ ತಯಾರಿ ನಡೆಸುತ್ತಿದ್ದಾರೆಂದು ಹೇಳಿದ ರಾವತ್, ``ಠಾಕ್ರೆ ಕುಟುಂಬ ಯಾವತ್ತೂ ಡೆಪ್ಯುಟಿ ಹುದ್ದೆಯನ್ನು ವಹಿಸಿಕೊಳ್ಳದು. ಆ ಕುಟುಂಬದ ಸದಸ್ಯ ಯಾವತ್ತೂ ಮುಖ್ಯಸ್ಥ.  ಈ ಕುಟುಂಬ ರಾಜ್ಯ ಮತ್ತು ರಾಷ್ಟ್ರ ರಾಜಕಾರಣದಲ್ಲಿ ತನ್ನದೇ ಪ್ರತಿಷ್ಠೆ ಹೊಂದಿದೆ,'' ಎಂದು ಹೇಳಿದರು. ``ತಾವು ಚುನಾವಣಾ ಕಣ ಪ್ರವೇಶಿಸುವ ಕುರಿತಂತೆ ಯಾವುದೇ ನಿರ್ಧಾರವನ್ನು ಪಕ್ಷದ ಅಧ್ಯಕ್ಷ ಉದ್ಧವ್ ಠಾಕ್ರೆ ಅವರೇ ಕೈಗೊಳ್ಳುತ್ತಾರೆಂದು ಅವರು (ಆದಿತ್ಯ ಠಾಕ್ರೆ) ಸ್ಪಷ್ಟಪಡಿಸಿದ್ದಾರೆ'' ಎಂದೂ ರಾವತ್ ಹೇಳಿಕೊಂಡರು.

 ಗುರುವಾರ ತಮ್ಮ ಹುಟ್ಟುಹಬ್ಬದ ಸಂದರ್ಭ ಪತ್ರಕರ್ತರ ಜತೆ ನಡೆದ ಸಂವಾದದ ವೇಳೆ ಈ ವಿಚಾರ ಪ್ರಸ್ತಾಪಗೊಂಡಾಗ ``ಈ ಬಗ್ಗೆ ಇಂದು ಮಾತನಾಡಲು ನಾನು ಇಚ್ಛಿಸುವುದಿಲ್ಲ.  ಮುಂದೆ ಚರ್ಚಿಸೋಣ'' ಎಂದು ಬಿಟ್ಟರು.

ಮುಂದಿನ ಸಿಎಂ ಅಭ್ಯರ್ಥಿ ಕೂಡ ತನ್ನ ಪಕ್ಷದವರೇ ಆಗಬೇಕೆಂದು ಬಿಜೆಪಿ ಹೇಳುತ್ತಿರುವುದರಿಂದ ಶಿವಸೇನೆ ತನಗೇ ಸಿಎಂ ಹುದ್ದೆ ಬೇಕೆಂದು ಪಟ್ಟು ಹಿಡಿದರೆ ಎರಡೂ ಪಕ್ಷಗಳ ನಡುವೆ ಮತ್ತೆ ಭಿನ್ನಮತವೇರ್ಪಡುವ ಸಾಧ್ಯತೆಗಳಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News