30 ಕೇಂದ್ರೀಯ ವಿವಿಗಳಿಗೆ ಅನುದಾನ

Update: 2019-06-16 03:57 GMT

ಹೊಸದಿಲ್ಲಿ: ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಆರ್ಥಿಕವಾಗಿ ದುರ್ಬಲ ವರ್ಗಕ್ಕೆ ನಿಗದಿಪಡಿಸಿರುವ ಶೇಕಡ 10ರ ಮೀಸಲಾತಿ ಜಾರಿಗೊಳಿಸುವ ಸಲುವಾಗಿ ಕೇಂದ್ರ ಸರ್ಕಾರ 30 ಕೇಂದ್ರೀಯ ವಿಶ್ವವಿದ್ಯಾನಿಲಯಗಳಿಗೆ 2019-20ನೇ ವರ್ಷಕ್ಕೆ 1496 ಕೋಟಿ ರೂ.ಗಳನ್ನು ಮಂಜೂರು ಮಾಡಿದೆ.

ದೆಹಲಿ ವಿವಿ ಮತ್ತು ವಿಶ್ವಭಾರತಿ ವಿವಿ ಈಗಾಗಲೇ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದಿಂದ ಮಂಜೂರಾತಿ ಪತ್ರ ಪಡೆದಿವೆ. ಜೆಎನ್‌ಯುನಂಥ ವಿವಿಗಳಿಗೆ ಇನ್ನಷ್ಟೇ ಮಂಜೂರಾತಿ ಪತ್ರ ಬರಬೇಕಿದೆ.

ದೆಹಲಿ ವಿವಿಗೆ 143.8 ಕೋಟಿ ರೂ. ಮಂಜೂರಾಗಿದ್ದು, ಸಂಲಗ್ನತ್ವ ಹೊಂದಿದ ಕಾಲೇಜುಗಳಿಗೆ 47.2 ಕೋಟಿ ರೂ. ಮಂಜೂರಾಗಿದೆ. ಕೇಂದ್ರದ ಕೋಟಾ ಅನ್ವಯ, ಪರಿಶಿಷ್ಟ ಜಾತಿ, ಪಂಡಗ ಮತ್ತು ಇತರ ಹಿಂದುಳಿದ ವರ್ಗಗಳ ಮೀಸಲಾತಿಗೆ ಧಕ್ಕೆಯಾಗದಂತೆ ಮುಂದುವರಿದ ವರ್ಗಗಳ ಬಡವರಿಗೆ ಸೀಟುಗಳನ್ನು ಮೀಸಲಿಡಲಾಗುತ್ತದೆ. ಇದಕ್ಕಾಗಿ ಶೇಕಡ 25ರಷ್ಟು ಸೀಟುಗಳನ್ನು ಹೆಚ್ಚಿಸಲಾಗುತ್ತಿದೆ.

ಬಹುತೇಕ ಕೇಂದ್ರೀಯ ವಿವಿಗಳು ಮೊದಲ ಹಂತದಲ್ಲಿ ಶೇಕಡ 10 ಹಾಗೂ 2020-21ರಲ್ಲಿ ಶೇಕಡ 15ರಷ್ಟು ಸೀಟುಗಳನ್ನು ಹೆಚ್ಚಿಸಲಿವೆ. ಆದರೆ ಜೆಎನ್‌ಯು ಸೇರಿದಂತೆ ಕೆಲ ಇತರ ವಿವಿಗಳು ಈ ವರ್ಷದಿಂದಲೇ ಶೇಕಡ 25ರಷ್ಟು ಸೀಟು ಹೆಚ್ಚಳಕ್ಕೆ ನಿರ್ಧರಿಸಿವೆ.

"ಆರ್ಥಿಕ ದುರ್ಬಲರ ಕೋಟಾಗಾಗಿ ಮುಂದಿನ ಶೈಕ್ಷಣಿಕ ವರ್ಷಕ್ಕಾಗಿ ಕೇಂದ್ರೀಯ ವಿವಿಗಳಿಗೆ 1496 ಕೋಟಿ ರೂ. ಮಂಜೂರು ಮಾಡಲಾಗಿದೆ. ಈ ಪೈಕಿ 230 ಕೋಟಿ ನಿರ್ವಹಣೆಗೆ, 249 ಕೋಟಿಯನ್ನು ವೇತನಕ್ಕಾಗಿ ಮತ್ತು 957 ಕೋಟಿ ರೂಪಾಯಿಯನ್ನು ನಿರ್ಮಾಣ ಹಾಗೂ ಮೂಲ ಸೌಕರ್ಯಕ್ಕೆ ನಿಗದಿಪಡಿಸಲಾಗಿದೆ" ಎಂದು ಹಿರಿಯ ಅಧಿಕಾರಿಯೊಬ್ಬರು ವಿವರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News