ಕಾಂಗ್ರೆಸ್ ನ ಸಂಸದೀಯ ನಾಯಕ ಯಾರು ?

Update: 2019-06-16 06:07 GMT

ಹೊಸದಿಲ್ಲಿ, ಜೂ.16: ಬಜೆಟ್ ಅಧೀವೇಶನ ಆರಂಭಗೊಳ್ಳಲು ಒಂದು ದಿನ ಬಾಕಿ ಇದೆ. ಆದರೆ ಕಾಂಗ್ರೆಸ್ ಇನ್ನೂ ತನ್ನ ಸಂಸದೀಯ ನಾಯಕನ ಆಯ್ಕೆ ಮಾಡಿಲ್ಲ. 
ಈ ಹಿಂದೆ ಸಂಸದೀಯ ನಾಯಕನಾಗಿದ್ದ ಮಲ್ಲಿಕಾರ್ಜುನ ಖರ್ಗೆ ಸೋಲು ಅನುಭವಿಸಿರುವ ಹಿನ್ನೆಲೆಯಲ್ಲಿ ಈ ಸ್ಥಾನಕ್ಕೆ ಇನ್ನೊಬ್ಬರ ಆಯ್ಕೆ ಮಾಡಬೇಕಾದ ಪರಿಸ್ಥಿತಿ ಉಂಟಾಗಿದೆ.
ಕಾಂಗ್ರೆಸ್ ಚುನಾವಣೆಯಲ್ಲಿ ಹೀನಾಯ ಸೋಲು ಅನುಭವಿಸಿದ ಹಿನ್ನೆಲೆಯಲ್ಲಿ ಪಕ್ಷದ ಅಧ್ಯಕ್ಷ ರಾಹುಲ್‌ ಗಾಂಧಿ ನೈತಿಕ ಹೊಣೆ ಹೊತ್ತು ರಾಜೀನಾಮೆ ಸಲ್ಲಿಸುವ ಇಂಗಿತ ವ್ಯಕ್ತಪಡಿಸಿದ್ದರು. ಆದರೆ ಅವರು ಇದೀಗ ಎಲ್ಲರ ಒತ್ತಾಯದ ಮೇರೆಗೆ ಮತ್ತೆ ಅದೇ ಸ್ಥಾನದಲ್ಲಿ ಮುಂದುವರಿಯಲು ಒಪ್ಪಿಕೊಂಡಿದ್ದಾರೆ.
ಕಾಂಗ್ರೆಸ್ ಅಧ್ಯಕ್ಷ ಸ್ಥಾನದ ಸಮಸ್ಯೆ ನಿವಾರಣೆಯಾಗುತ್ತಲೇ ಕಾಂಗ್ರೆಸ್ ಗೆ ಸಂಸದೀಯ ನಾಯಕನ ಆಯ್ಕೆ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಕಾಂಗ್ರೆಸ್ ಸಂಸದೀಯ ಸ್ಥಾನಕ್ಕೆ ಇದೀಗ ಹಲವು ಮಂದಿ ನಾಯಕರ ಹೆಸರು ಕೇಳಿ ಬಂದಿದೆ.
ಕೇಂದ್ರದ ಮಾಜಿ ಸಚಿವರಾದ ಮನೀಷ್‌ ತಿವಾರಿ ಮತ್ತು  ಶಶಿ ತರೂರು(ತಿರುವನಂತಪುರ), ಪಶ್ಚಿಮ ಬಂಗಾಳದ ಕಾಂಗ್ರೆಸ್ ಅಧ್ಯಕ್ಷ ಆದಿರ್‌ ರಂಜನ್ ಚೌಧರಿ(ಆನಂದ್ ಪುರ‍್ ಸಾಯೀಬ್) , ಕೇರಳ ಪ್ರದೇಶ ಕಾಂಗ್ರೆಸ್ ಕಾರ್ಯಾಧ್ಯಕ್ಷ ಕೆ.ಸುರೇಶ್  (ಮಾವಳಿಕ್ಕರ)ಅವರ ಹೆಸರು ಪ್ರತಿಷ್ಠಿತ ಸ್ಥಾನಕ್ಕೆ ಕೇಳಿ ಬಂದಿವೆ.
ಕೇರಳ, ಪಂಜಾಬ್, ಮತ್ತು ತಮಿಳುನಾಡು ರಾಜ್ಯಗಳಲ್ಲಿ ಕಾಂಗ್ರೆಸ್ ಹೆಚ್ಚು ಸ್ಥಾನಗಳನ್ನು ಜಯಿಸಿರುವ ಹಿನ್ನೆಲೆಯಲ್ಲಿ ಆ ರಾಜ್ಯಗಳ ನಾಯಕರು ಸಹಜವಾಗಿಯೇ ರೇಸ್ ನಲ್ಲಿದ್ದಾರೆ.
ಹಿಂದಿ ಮತ್ತು ಆಂಗ್ಲ ಭಾಷೆಯಲ್ಲಿ ಹೆಚ್ಚಿನ ಹಿಡಿತ ಇರುವವರಿಗೆ ಸಂಸದೀಯ ನಾಯಕನ ಹುದ್ದೆ ದೊರೆಯಲಿದೆ. ಮಾಜಿ ಸಚಿವ ಶಶಿ ತರೂರು ಈ ಸ್ಥಾನಕ್ಕೆ ಸಮರ್ಥರಾಗಿದ್ದರೂ,  ಅವರಿಗೆ ಪತ್ನಿ ಸುನಂದಾ ಪುಷ್ಕರ‍್ ನಿಗೂಢ ಸಾವಿನ ಪ್ರಕರಣ ಅಡ್ಡಿಯಾಗಿದೆ. ಇದು ಶಶಿ ತರೂರು ಅವರಿಗೆ ಸಮಸ್ಯೆಯಾಗಿದೆ. ಕೇರಳದ ಸುರೇಶ್  ಅವರಿಗೆ ಅರ್ಹತೆ ಇದ್ದರೂ ಅವರಿಗೆ ಹಿಂದಿ ಮತ್ತು ಇಂಗ್ಲೀಷ್ ನಲ್ಲಿ ಅಷ್ಟೊಂದು ಹಿಡಿತ ಇಲ್ಲ.  ಕಾಂಗ್ರೆಸ್ ವಕ್ತಾರ ಮನೀಷ್ ತಿವಾರಿ ಅವರು ಎರಡೂ ಭಾಷೆಗಳಲ್ಲೂ ಹಿಡಿತ ಹೊಂದಿದ್ದಾರೆ. ಈ ಕಾರಣದಿಂದಾಗಿ ತಿವಾರಿಗೆ ಸಂಸದೀಯ ನಾಯಕನ ಹುದ್ದೆ ಒಲಿದು ಬರುವ ಸಾಧ್ಯತೆ ಇದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News