ಉಗ್ರರಿಗೆ ಬಲಿಯಾದ ಪೊಲೀಸ್ ಇನ್‌ಸ್ಪೆಕ್ಟರ್ ಅರ್ಷದ್ ಖಾನ್ ರ ಮಗುವನ್ನೆತ್ತಿಕೊಂಡು ಕಣ್ಣೀರ ಕೋಡಿಯಾದ ಎಸ್‌ಎಸ್ಪಿ

Update: 2019-06-18 07:02 GMT

ಶ್ರೀನಗರ್, ಜೂ.18: ಜಮ್ಮು ಕಾಶ್ಮೀರದ ಅನಂತ್ ನಾಗ್ ನಲ್ಲಿ ಇತ್ತೀಚೆಗೆ ನಡೆದ ಉಗ್ರ ದಾಳಿಯಲ್ಲಿ ಹತರಾದ ಇನ್‌ಸ್ಪೆಕ್ಟರ್ ಅರ್ಷದ್ ಖಾನ್ ಅವರ ನಾಲ್ಕು ವರ್ಷದ ಪುತ್ರನನ್ನು ಎತ್ತಿಕೊಂಡಿದ್ದ ಶ್ರೀನಗರದ ಹಿರಿಯ ಸುಪರಿಂಟೆಂಡೆಂಟ್ ಆಫ್ ಪೊಲೀಸ್ ಹಸೀಬ್ ಮುಘಲ್ ದುಃಖದ ಕಟ್ಟೆಯೊಡೆದು ಕಣ್ಣೀರು ಸುರಿಸಿದ ಫೋಟೋ ಎಲ್ಲರನ್ನೂ ಭಾವಪರವಶರನ್ನಾಗಿಸಿದೆ. ಈ ಫೋಟೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಶ್ರೀನಗರದ ಜಿಲ್ಲಾ ಪೊಲೀಸ್ ಲೈನ್ ನಲ್ಲಿ ಮೃತ ಇನ್‌ಸ್ಪೆಕ್ಟರ್ ಅರ್ಷದ್ ಖಾನ್ ಅವರ ಗೌರವಾರ್ಥ ನಡೆದ ಪುಷ್ಪಗುಚ್ಛ ಸಮರ್ಪಣಾ ಸಮಾರಂಭದಲ್ಲಿ ಈ ಘಟನೆ ನಡೆದಿದೆ. ಇನ್‌ಸ್ಪೆಕ್ಟರ್ ಪುತ್ರ ನಾಲ್ಕು ವರ್ಷದ ಉಹ್ಬಾನ್ ನನ್ನು ಎತ್ತಿಕೊಂಡು ಅರ್ಷದ್ ಅವರ ಪಾರ್ಥಿವ ಶರೀರದ ಸುತ್ತ ಸಾಗಿದಾಗ ಹಸೀಬ್ ಮುಘಲ್ ಕಣ್ಣೀರ ಕೋಡಿಯಾಗಿದ್ದರು.

ಬುಧವಾರ ಉಗ್ರರು ಸಿಆರ್‌ಪಿಎಫ್ ತಂಡದ ಮೇಲೆ ಗುಂಡಿನ ದಾಳಿ ನಡೆಸಿದ ಸಂದರ್ಭ ಗಾಯಗೊಂಡಿದ್ದ ಅರ್ಷದ್ ಖಾನ್ ರವಿವಾರ ದಿಲ್ಲಿಯ ಏಮ್ಸ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು. ಈ ದಾಳಿಯಲ್ಲಿ ಒಟ್ಟು ಐದು ಜವಾನರು ಬಲಿಯಾಗಿದ್ದರೆ, ಇಬ್ಬರು ಉಗ್ರರಲ್ಲಿ ಒಬ್ಬನನ್ನು ಗುಂಡಿಕ್ಕಿ ಸಾಯಿಸುವಲ್ಲಿ ಭದ್ರತಾ ಪಡೆಗಳು ಸಫಲವಾಗಿದ್ದವು.

ಅರ್ಷದ್ ಖಾನ್ ಅವರು ಅನಂತ್ ನಾಗ್ ಪಟ್ಟಣದ ಸದರ್ ಪೊಲೀಸ್ ಠಾಣೆಯಲ್ಲಿ ಠಾಣಾಧಿಕಾರಿಯಾಗಿದ್ದರು. ಅವರು ಪತ್ನಿ, ಇಬ್ಬರು ಪುತ್ರರು ಹೆತ್ತವರು ಹಾಗೂ ಕಿರಿಯ ಸೋದರನನ್ನು ಅಗಲಿದ್ದಾರೆ. ಶ್ರೀನಗರದವರಾಗಿರುವ ಅವರು 2002ರಲ್ಲಿ ರಾಜ್ಯ ಪೊಲೀಸ್ ಸೇವೆ ಸೇರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News