ಜಾರ್ಖಂಡ್: ಅಲ್ಪಸಂಖ್ಯಾತರ ವಿರುದ್ಧ ಈ ವರ್ಷದಲ್ಲಿ 11ನೇ ಗುಂಪು ದಾಳಿ!

Update: 2019-06-25 04:15 GMT
ತಬ್ರೇಝ್ ಅನ್ಸಾರಿ

ಹೊಸದಿಲ್ಲಿ, ಜೂ.25: ಜಾರ್ಖಂಡ್‌ನಲ್ಲಿ ಗುಂಪು ಹಿಂಸಾಚಾರದಲ್ಲಿ ಮುಸ್ಲಿಂ ವ್ಯಕ್ತಿ ಮೃತಪಟ್ಟಿರುವುದು ಈ ವರ್ಷದಲ್ಲಿ ಇದೇ ಮೊದಲಲ್ಲ. ಫ್ಯಾಕ್ಟ್‌ಚೆಕ್ಕರ್.ಇನ್ ಎಂಬ ವೆಬ್‌ಸೈಟ್‌ನಲ್ಲಿ ಲಭ್ಯವಾದ ಮಾಹಿತಿಯ ಪ್ರಕಾರ, ಇದು ಪ್ರಸಕ್ತ ವರ್ಷದಲ್ಲಿ ದ್ವೇಷಾಪರಾಧದ 11ನೇ ಘಟನೆಯಾಗಿದ್ದು, ವರ್ಷಾರಂಭದಿಂದ ಇದುವರೆಗೆ ಇಂಥ ದಾಳಿಯಲ್ಲಿ ನಾಲ್ಕು ಮಂದಿ ಮೃತಪಟ್ಟಿದ್ದು, ಇತರ 22 ಮಂದಿ ಗಾಯಗೊಂಡಿದ್ದಾರೆ.

ಕಳೆದ ಒಂದು ದಶಕದಲ್ಲಿ 297 ದ್ವೇಷಾಪರಾಧ ಪ್ರಕರಣಗಳು ದೇಶಾದ್ಯಂತ ಸಂಭವಿಸಿದ್ದು, 98 ಮಂದಿಯ ಜೀವವನ್ನು ಇಂಥ ಪ್ರಕರಣಗಳು ಬಲಿ ಪಡೆದಿವೆ. 722 ಮಂದಿ ಗಾಯಗೊಂಡಿದ್ದಾರೆ.

ಕಳೆದ ಕೆಲ ವರ್ಷಗಳಲ್ಲಿ ಇಂಥ ಗುಂಪು ಹಿಂಸಾಚಾರದ ಘಟನೆಗಳು ಹೆಚ್ಚುತ್ತಿರುವುದು ಕೂಡಾ ಅಂಕಿಅಂಶಗಳಿಂದ ತಿಳಿದುಬಂದಿದೆ. 2015ರಿಂದೀಚೆಗೆ ದನ ಕಳವು ಅಥವಾ ಗೋಹತ್ಯೆಗೆ ಸಂಬಂಧಿಸಿದಂತೆ 121 ಗುಂಪು ಹಿಂಸಾಚಾರ ಘಟನೆಗಳು ನಡೆದಿವೆ. 2012-14ರ ಅವಧಿಯಲ್ಲಿ ಇಂಥ ಕೇವಲ 6 ಘಟನೆಗಳು ವರದಿಯಾಗಿದ್ದವು.

2009ರಿಂದ 2019ರವರೆಗಿನ ಒಟ್ಟಾರೆ ಅಂಕಿಅಂಶಗಳಿಂದ ತಿಳಿದುಬರುವಂತೆ ಈ ಪ್ರಕರಣಗಳ ಸಂತ್ರಸ್ತರ ಪೈಕಿ ಶೇಕಡ 59ರಷ್ಟು ಮುಸ್ಲಿಮರು. ಶೇಕಡ 28ರಷ್ಟು ಪ್ರಕಕರಣಗಳು ಜಾನುವಾರು ಕಳವು ಅಥವಾ ಹತ್ಯೆಗೆ ಸಂಬಂಧಿಸಿದವು. ಇಂಥ ಪ್ರಕರಣಗಳಲ್ಲಿ ಶೇಕಡ 66ರಷ್ಟು ಬಿಜೆಪಿ ಆಡಳಿತದ ರಾಜ್ಯಗಳಿಂದ ವರದಿಯಾಗಿದ್ದರೆ, ಶೇಕಡ 16ರಷ್ಟು ಪ್ರಕರಣಗಳು ಕಾಂಗ್ರೆಸ್ ಆಡಳಿತದ ರಾಜ್ಯಗಳಲ್ಲಿ ಸಂಭವಿಸಿವೆ.

ತಬ್ರೇಝ್ ಅನ್ಸಾರಿ ಎಂಬ ವ್ಯಕ್ತಿಯ ಮೇಲೆ ಜಾರ್ಖಂಡ್ ರಾಜ್ಯದ ಖರ್ಸಾವಾನ್ ಜಿಲ್ಲೆಯಲ್ಲಿ ಕಳ್ಳತನದ ಆರೋಪದಲ್ಲಿ ಗುಂಪು ಹಲ್ಲೆ ನಡೆದಿತ್ತು. ಕಂಬಕ್ಕೆ ಆತನನ್ನು ಕಟ್ಟಿಹಾಕಿ ಹಲವು ಗಂಟೆಗಳ ಕಾಲ ಥಳಿಸಿ ಬಳಿಕ ಪೊಲೀಸರಿಗೆ ಒಪ್ಪಿಸಲಾಗಿತ್ತು. ಈತನಿಂದ ಬಲವಂತವಾಗಿ 'ಜೈಶ್ರೀರಾಮ್' ಹಾಗೂ 'ಜೈ ಹನುಮಾನ್' ಎಂಬ ಘೋಷಣೆಗಳನ್ನು ಕೂಗಿಸಿದ ದೃಶ್ಯಾವಳಿ ವೀಡಿಯೊದಿಂದ ಬಹಿರಂಗವಾಗಿತ್ತು. ಶನಿವಾರ ಆತ ಮೃತಪಟ್ಟಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ. ದಾಳಿಯ ಬಗ್ಗೆ ದೇಶಾದ್ಯಂತ ಆಕ್ರೋಶ ವ್ಯಕ್ತವಾದ ಹಿನ್ನೆಲೆಯಲ್ಲಿ 11 ಮಂದಿಯನ್ನು ಬಂಧಿಸಿ, ಇಬ್ಬರು ಪೊಲೀಸರನ್ನು ಅಮಾನತು ಮಾಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News