ಪೆಹ್ಲೂ ಖಾನ್ ವಿರುದ್ಧ ಚಾರ್ಜ್ ಶೀಟ್ ಬಗ್ಗೆ ಪ್ರತಿಕ್ರಿಯಿಸಿದ ರಾಜಸ್ಥಾನ ಸಿಎಂ ಗೆಹ್ಲೋಟ್

Update: 2019-06-29 11:07 GMT

ಹೊಸದಿಲ್ಲಿ, ಜೂ.29: ರಾಜಸ್ಥಾನದ ಆಲ್ವಾರ್ ನಲ್ಲಿ ಎರಡು ವರ್ಷಗಳ ಹಿಂದೆ ಗೋರಕ್ಷಕರಿಂದ ಥಳಿತಕ್ಕೊಳಗಾಗಿ ನಂತರ ಮೃತಪಟ್ಟ ಪೆಹ್ಲೂ ಖಾನ್ ವಿರುದ್ಧ ರಾಜಸ್ಥಾನ ಪೊಲೀಸರು ಚಾರ್ಜ್ ಶೀಟ್ ಸಲ್ಲಿಸಿರುವ ಕುರಿತಂತೆ ಎದ್ದಿರುವ ವಾದವಿವಾದಗಳ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿರುವ ರಾಜ್ಯದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್, ಈ ಪ್ರಕರಣದ ವಿಚಾರಣೆಯನ್ನು ಹಿಂದಿನ ಬಿಜೆಪಿ ಸರಕಾರ ನಡೆಸಿತ್ತು ಎಂದರಲ್ಲದೆ, ತನಿಖೆಯಲ್ಲಿ ಲೋಪಗಳು ಕಂಡು ಬಂದರೆ ಮರು ತನಿಖೆ ನಡೆಸಲಾಗುವುದು ಎಂದಿದ್ದಾರೆ.

ಪೊಲೀಸರು ಸಲ್ಲಿಸಿರುವ ಚಾರ್ಜ್ ಶೀಟ್ ನಲ್ಲಿ ಪೆಹ್ಲೂ ಖಾನ್ ಮತ್ತವರ ಪುತ್ರರ ವಿರುದ್ಧ ರಾಜಸ್ಥಾನ ಗೋ ಹತ್ಯೆ ಮತ್ತು ಗೋಸಾಗಾಟ ನಿಷೇಧ ಕಾಯಿದೆಯ ಸೆಕ್ಷನ್ 5, 8 ಹಾಗೂ 9ರ ಅನ್ವಯ ಪ್ರಕರಣ ದಾಖಲಿಸಲಾಗಿದೆ.

ಈ ಚಾರ್ಜ್ ಶೀಟ್ ಸಲ್ಲಿಕೆಯನ್ನು ಎಐಎಂಐಎಂ ಅಧ್ಯಕ್ಷ ಅಸಾಸುದ್ದೀನ್ ಒವೈಸಿ ಖಂಡಿಸಿದ್ದಾರಲ್ಲದೆ ಕಾಂಗ್ರೆಸ್ ಇಬ್ಬಗೆಯ ನೀತಿ ಅನುಸರಿಸುತ್ತಿದೆ ಎಂದು ಆರೋಪಿಸಿದ್ದಾರೆ.

“ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತಿದ್ದಂತೆಯೇ ಬಿಜೆಪಿಯ ತದ್ರೂಪವಾಗುತ್ತದೆ, ವಿಪಕ್ಷದಲ್ಲಿದ್ದಾಗ ಅವರು ಮೊಸಳೆ ಕಣ್ಣೀರು ಸುರಿಸುತ್ತಾರೆ'' ಎಂದು ಒವೈಸಿ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News