ಜಮ್ಮು-ಕಾಶ್ಮೀರದ ಕುರಿತು ಶಾ ಹೇಳಿಕೆಗೆ ಸಿಪಿಎಂ ಟೀಕೆ

Update: 2019-06-29 18:30 GMT

ಹೊಸದಿಲ್ಲಿ, ಜೂ.29: ಜಮ್ಮು ಕಾಶ್ಮೀರದಲ್ಲಿ ಶೀಘ್ರದಲ್ಲೇ ವಿಧಾನಸಭೆ ಚುನಾವಣೆ ನಡೆಯಬೇಕು ಎಂದು ಒತ್ತಾಯಿಸಿರುವ ಸಿಪಿಐ(ಎಂ), ಲೋಕಸಭೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಜಮ್ಮು ಕಾಶ್ಮೀರದ ಬಗ್ಗೆ ನೀಡಿರುವ ಹೇಳಿಕೆ ಜನರನ್ನು ಕೆರಳಿಸುವಂತಿದೆ ಎಂದು ಟೀಕಿಸಿದೆ.

ಶುಕ್ರವಾರ ಲೋಕಸಭೆಯಲ್ಲಿ ಮಾತನಾಡಿದ್ದ ಅಮಿತ್ ಶಾ, ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸುವ ಸಂವಿಧಾನದ 370ನೇ ಪರಿಚ್ಛೇದ ತಾತ್ಕಾಲಿಕವಾದುದು, ಶಾಶ್ವತವಲ್ಲ ಎಂದು ಹೇಳಿದ್ದರು.

  ಕೇಂದ್ರ ಗೃಹ ಸಚಿವರ ಈ ಹೇಳಿಕೆಯು ಜಮ್ಮು ಕಾಶ್ಮೀರದ ಜನರಲ್ಲಿ ಪರಕೀಯ ಭಾವನೆಯನ್ನು ಮತ್ತಷ್ಟು ಹೆಚ್ಚು ಮಾಡುವಂತಿದೆ . ಜಮ್ಮು ಕಾಶ್ಮೀರಕ್ಕೆ ಮಾತ್ರ ವಿಶೇಷ ಸ್ಥಾನಮಾನ ನೀಡಲಾಗಿದೆ ಎಂಬರ್ಥವನ್ನು ಶಾ ಹೇಳಿಕೆ ಪ್ರತಿಧ್ವನಿಸುತ್ತದೆ. ಆದರೆ ಸಂವಿಧಾನದಲ್ಲಿ ಮಹಾರಾಷ್ಟ್ರ, ಗುಜರಾತ್, ನಾಗಾಲ್ಯಾಂಡ್, ಅಸ್ಸಾಂ, ಮಣಿಪುರ, ಆಂಧ್ರಪ್ರದೇಶ(ಈಗ ತೆಲಂಗಾಣ) ಮತ್ತು ಗೋವಾ (371, 371(ಎ) ಯಿಂದ (ಐ) ಪರಿಚ್ಛೇದ) ರಾಜ್ಯಗಳಿಗೂ ವಿಶೇಷ ಸ್ಥಾನಮಾನ ನೀಡಲಾಗಿದೆ ಎಂದು ಸಿಪಿಎಂ ಹೇಳಿದೆ.

  ಜಮ್ಮು ಕಾಶ್ಮೀರದಲ್ಲಿ ಲೋಕಸಭೆ ಚುನಾವಣೆ ನಡೆಸಲು ಸಾಧ್ಯವಿದೆ ಎಂದಾದರೆ ವಿಧಾನಸಭೆ ಚುನಾವಣೆಯನ್ನೂ ನಡೆಸಬಾರದೇಕೆ ಎಂದು ಪಕ್ಷವು ಪ್ರಶ್ನಿಸಿದ್ದು, ರಾಜ್ಯದ ಎಲ್ಲಾ ರಾಜಕೀಯ ಪಕ್ಷಗಳೂ ರಾಜ್ಯ ವಿಧಾನಸಭೆಗೆ ತಕ್ಷಣ ಚುನಾವಣೆ ನಡೆಸಲು ಒತ್ತಾಯಿಸಬೇಕು. ಕಾಶ್ಮೀರದ ಜನತೆಯನ್ನು ಪ್ರಜಾಪ್ರಭುತ್ವ ಪ್ರಕ್ರಿಯೆಗೆ ಸೆಳೆಯಲು ಇದು ಸರಿಯಾದ ಕ್ರಮವಾಗಿದೆ ಎಂದಿದೆ.

ಶಾ ಅವರ ಹೇಳಿಕೆ ದೇಶದ ಏಕತೆ ಮತ್ತು ಸಮಗ್ರತೆಗೆ ಪೂರಕವಾಗಿಲ್ಲ. ಜನತೆಯಲ್ಲಿ ಪರಕೀಯ ಭಾವನೆ ಮೂಡಿದರೆ ಭಯೋತ್ಪಾದಕ ಕೃತ್ಯದ ಆರಂಭಕ್ಕೆ ಕಾರಣವಾಗುತ್ತದೆ ಎಂದು ಸಿಪಿಎಂ ಹೇಳಿದೆ.

ಜಮ್ಮು ಕಾಶ್ಮೀರಕ್ಕೆ ಸಂಬಂಧಿಸಿದ ಎಲ್ಲಾ ಪಕ್ಷಗಳು, ಸಂಘಟನೆಗಳೊಂದಿಗೆ ರಾಜಕೀಯ ಮಾತುಕತೆ ಆರಂಭಿಸುವ ಮೂಲಕ ಕೇಂದ್ರ ಸರಕಾರ ವಿಶ್ವಾಸ ವರ್ಧನೆಯ ಕಾರ್ಯ ಆರಂಭಿಸಬೇಕು ಎಂದು ಸಿಪಿಎಂ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News