×
Ad

ಬ್ಯಾಟ್‌ನಿಂದ ಅಧಿಕಾರಿಗೆ ಹಲ್ಲೆಗೈದಿದ್ದ ಬಿಜೆಪಿ ಶಾಸಕ ಜೈಲಿನಿಂದ ಬಿಡುಗಡೆ, ಹೂಹಾರ ಹಾಕಿ ಸ್ವಾಗತ

Update: 2019-06-30 11:19 IST

ಇಂದೋರ್, ಜೂ.30: ಕ್ರಿಕೆಟ್ ಬ್ಯಾಟ್‌ನಿಂದ ಮಹಾನಗರ ಪಾಲಿಕೆಯ ಅಧಿಕಾರಿಯೊಬ್ಬರಿಗೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ 4 ದಿನಗಳ ಹಿಂದೆ ಬಂಧಿಸಲ್ಪಟ್ಟಿದ್ದ ಬಿಜೆಪಿ ಶಾಸಕ ಆಕಾಶ್ ವಿಜಯವರ್ಗಿಯ ಜಾಮೀನಿನ ಮೇಲೆ ರವಿವಾರ ಬೆಳಗ್ಗೆ ಸ್ಥಳೀಯ ಜೈಲಿನಿಂದ ಬಿಡುಗಡೆಯಾದರು.

ಜೈಲಿನಿಂದ ಹೊರ ಬಂದ ಆಕಾಶ್‌ಗೆ ಬಿಜೆಪಿ ಬೆಂಬಲಿಗರು ಹೂ ಹಾರ ಹಾಕಿ ಸ್ವಾಗತಿಸಿದರು.

ಭೋಪಾಲ್ ನ್ಯಾಯಾಲಯ ಶನಿವಾರ ಆಕಾಶ್‌ಗೆ ಜಾಮೀನು ನೀಡಿತ್ತು. ಹಲ್ಲೆ ಪ್ರಕರಣದಲ್ಲಿ 50,000 ರೂ. ವೈಯಕ್ತಿಕ ಬಾಂಡ್ ಹಾಗೂ ಮತ್ತೊಂದು ಪ್ರಕರಣದಲ್ಲಿ 20,000 ರೂ. ಬಾಂಡ್ ನೀಡುವಂತೆಯೂ ನ್ಯಾಯಾಲಯ ಆದೇಶಿಸಿತ್ತು.

 ಇದೇ ಮೊದಲ ಬಾರಿ ಇಂದೋರ್-3 ಅಸೆಂಬ್ಲಿ ಕ್ಷೇತ್ರದಿಂದ ಚುನಾಯಿತರಾಗಿದ್ದ ಆಕಾಶ್(34 ವರ್ಷ)ಕುಸಿದು ಬೀಳುವ ಮನೆಯನ್ನು ತೆರವುಗೊಳಿಸಲು ಆಗಮಿಸಿದ್ದ ಮಹಾನಗರ ಪಾಲಿಕೆ ಅಧಿಕಾರಿ ಧೀರೇಂದ್ರ ಬೈಸ್ ಎಂಬುವವರಿಗೆ ಬ್ಯಾಟ್‌ನಿಂದ ಹಲ್ಲೆ ನಡೆಸಿದ್ದರು. ಬುಧವಾರ ನಡೆದ ಈ ಘಟನೆಯು ಟಿವಿ ಕ್ಯಾಮರಾಗಳಲ್ಲಿ ಸೆರೆ ಯಾಗಿತ್ತು.

ಘಟನೆಯ ವಿಚಾರಣೆ ನಡೆಸಿದ್ದ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಆಕಾಶ್‌ಗೆ ಜಾಮೀನು ನಿರಾಕರಿಸಿ ಜುಲೈ 11ರ ತನಕ ನ್ಯಾಯಾಂಗ ಕಸ್ಟಡಿಗೆ ಒಪ್ಪಿಸಿತ್ತು. ಇದೀಗ ಭೋಪಾಲ್‌ನ ವಿಶೇಷ ನ್ಯಾಯಾಲಯ ಆಕಾಶ್‌ಗೆ ಜಾಮೀನು ಮಂಜೂರು ಮಾಡಿದೆ.

ಆಕಾಶ್‌ಗೆ ಶನಿವಾರ ಜಾಮೀನು ನೀಡಿದ ಸುದ್ದಿ ಹೊರಬರುತ್ತಿದ್ದಂತೆಯೇ ಬಿಜೆಪಿ ಕಚೇರಿಯ ಹೊರಗೆ ಪಟಾಕಿ ಸಿಡಿಸಿ ಸಂಭ್ರಮಿಸಲಾಗಿತ್ತು. ಇಂದು ಜೈಲಿನಿಂದ ಸೀದಾ ಬಿಜೆಪಿ ಕಚೇರಿಗೆ ತೆರಳಿದ ಆಕಾಶ್‌ಗೆ ಕಾರ್ಯಕರ್ತರು ಮತ್ತೊಮ್ಮೆ ಹೂಹಾರ ಹಾಕಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News