ಜೋಧ್ಪುರದ ಆಸ್ಪತ್ರೆಯೊಳಗೆ ಬೆಂಕಿಹಚ್ಚಿಕೊಂಡು ನರ್ಸ್ ಆತ್ಮಹತ್ಯೆ

Update: 2019-06-30 07:01 GMT

ಜೋಧ್‌ಪುರ, ಜೂ.30: ಜೋಧ್‌ಪುರ ಏಮ್ಸ್ ಆಸ್ಪತ್ರೆಯ ನರ್ಸಿಂಗ್ ಸ್ಟಾಫ್‌ನ ಮಹಿಳೆಯೊಬ್ಬರು ಕೊಠಡಿಯ ಬಾಗಿಲು ಹಾಕಿಕೊಂಡು ಸ್ವತಃ ಮೈಗೆ ಬೆಂಕಿಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೆಚ್ಚುವರಿ ಪೊಲೀಸ್ ಕಮಿಶನರ್ ಚೈನ್ ಸಿಂಗ್ ಮಚೆಚಾ ಹೇಳಿದ್ದಾರೆ.

‘‘ಏಮ್ಸ್ ಆಸ್ಪತ್ರೆಯಲ್ಲಿ ಮಹಿಳೆಯೊಬ್ಬರು ಸ್ವತಃ ಬೆಂಕಿ ಹಚ್ಚಿಕೊಂಡಿರುವ ಮಾಹಿತಿ ಬೆಳಗ್ಗೆ 8:30ರ ಸುಮಾರಿಗೆ ನಮಗೆ ಲಭಿಸಿತು. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಆಪರೇಶನ್ ಥಿಯೇಟರ್ ಬಳಿ ಇರುವ ಕಟ್ಟಡದ ಮೂರನೇ ಮಾಳಿಗೆಯಲ್ಲಿ ಮಹಿಳೆಯ ಮೃತದೇಹ ಪತ್ತೆಯಾಗಿದೆ. ಮಹಿಳೆಯನ್ನು ಕೇರಳದ ಬಿಜು ಪುನೊಜ್ ಎಂದು ಗುರುತಿಸಲಾಗಿದೆ. ಅವರು ಕಳೆದ 2 ವರ್ಷಗಳಿಂದ ಏಮ್ಸ್ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದರು’’ ಎಂದು ಚೈನ್ ಸಿಂಗ್ ಹೇಳಿದ್ದಾರೆ.

ಮೂರನೇ ಮಾಳಿಗೆಯಲ್ಲಿ ಬೆಂಕಿ ಹೊರಬರುತ್ತಿದೆ ಎಂದು ಆಸ್ಪತ್ರೆಯ ಸಿಬ್ಬಂದಿಗೆ ಸಾರ್ವಜನಿಕರು ಮಾಹಿತಿ ನೀಡಿದ್ದರು. ತಕ್ಷಣವೇ ಬೆಂಕಿ ನಂದಿಸಲು ಅಗ್ನಿ ಶಾಮಕ ಅಧಿಕಾರಿಯನ್ನು ಸ್ಥಳಕ್ಕೆ ಕಳುಹಿಸಿಕೊಡಲಾಗಿತ್ತು. ಘಟನೆಯ ವೇಳೆ ಮಹಿಳೆ ಕೊಠಡಿಗೆ ಬಾಗಿಲು ಹಾಕಿಕೊಂಡಿದ್ದರು. ಅಧಿಕಾರಿಗಳು ಬಾಗಿಲನ್ನು ಬಲವಂತವಾಗಿ ತೆರೆದು ನೋಡಿದಾಗ ಮಹಿಳೆಯರ ಮೃತದೇಹ ಪತ್ತೆಯಾಗಿದೆ. ಆ ಬಳಿಕ ಪೊಲೀಸರಿಗೆ ಮಾಹಿತಿ ನೀಡಲಾಗಿದೆ.

ಕೌಟುಂಬಿಕ ಕಾರಣದಿಂದಾಗಿ ಬಿಜು ಪುನೊಜ್ ಮಾನಸಿಕ ಖಿನ್ನತೆಗೆ ಒಳಗಾಗಿದ್ದರು ಎಂದು ಮೃತ ಮಹಿಳೆಯರ ರೂಮ್‌ಮೇಟ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News