ದೋಷಾರೋಪ ಪಟ್ಟಿಯಲ್ಲಿ ಪೆಹ್ಲೂಖಾನ್ ಹೆಸರಿಲ್ಲ: ಅಶೋಕ್ ಗೆಹ್ಲೋಟ್ ಸ್ಪಷ್ಟನೆ

Update: 2019-06-30 06:54 GMT

 ಜೈಪುರ, ಜೂ.29: ನಕಲಿ ಗೋರಕ್ಷಕರಿಂದ ಬರ್ಬರವಾಗಿ ಹತ್ಯೆಗೀಡಾಗಿದ್ದ ರಾಜಸ್ಥಾನದ ಆಲ್ವಾರ್ ಜಿಲ್ಲೆಯ ಹೈನು ಕೃಷಿಕ ಪೆಹ್ಲೂಖಾನ್ ವಿರುದ್ಧವೇ ಪೊಲೀಸರು ದೋಷಾರೋಪ ಪಟ್ಟಿ ದಾಖಲು ಮಾಡಿರುವುದಕ್ಕೆ ಭಾರೀ ಪ್ರತಿರೋಧ ವ್ಯಕ್ತವಾದ ಹಿನ್ನಲೆಯಲ್ಲಿ ಎಚ್ಚೆತ್ತುಕೊಂಡಿರುವ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ 2018ರ ಡಿಸೆಂಬರ್‌ನಲ್ಲಿ ರಾಜಸ್ಥಾನ ಪೊಲೀಸರು ಸಲ್ಲಿಸಿರುವ ಚಾರ್ಜ್‌ಶೀಟ್‌ನಲ್ಲಿ ಹೈನು ಕೃಷಿಕ ಪೆಹ್ಲೂಖಾನ್ ಹೆಸರಿಲ್ಲ ಎಂದು ಶನಿವಾರ ಸ್ಪಷ್ಟಪಡಿಸಿದ್ದಾರೆ.

 ದೇಶದ ಯಾವುದೇ ಭಾಗದಲ್ಲಿ ಯಾವುದೇ ರೀತಿಯ ಥಳಿಸಿ ಹತ್ಯೆಗೈಯುವುದನ್ನು ಕಾಂಗ್ರೆಸ್ ಸೈದ್ದಾಂತಿಕವಾಗಿ ವಿರೋಧಿಸುತ್ತಾ ಬಂದಿದೆ. ‘ಇಂಡಿಯನ್ ಎಕ್ಸ್‌ಪ್ರೆಸ್’ನಲ್ಲಿ ವರದಿಯಾಗಿರುವ ಸುದ್ದಿಯು ವಾಸ್ತವವಾಗಿ ತಪ್ಪಾಗಿದೆ. 2018ರ ಡಿಸೆಂಬರ್‌ನಲ್ಲಿ ರಾಜಸ್ಥಾನ ಪೊಲೀಸರು ಸಲ್ಲಿಸಿರುವ ಚಾರ್ಜ್‌ಶೀಟ್‌ನಲ್ಲಿ ಹತ್ಯೆಗೀಡಾಗಿರುವ ಪೆಹ್ಲೂಖಾನ್ ಹೆಸರಿಲ್ಲ. ಇದೊಂದು ಪ್ರತ್ಯೇಕ ಪ್ರಕರಣವಾಗಿ ದಾಖಲಾಗಿದ್ದು, ಹಿಂದಿನ ಸರಕಾರ 2017-18ರಲ್ಲಿ ಖಾನ್ ಪುತ್ರರಾದ ಆರಿಫ್, ಇರ್ಷಾದ್ ಹಾಗೂ ಖಾನ್ ಮುಹಮ್ಮದ್(ಟ್ರಾನ್ಸ್‌ಪೋರ್ಟರ್)ವಿರುದ್ದ ತನಿಖೆ ನಡೆಸುತ್ತಿತ್ತು. 2018 ಡಿಸೆಂಬರ್‌ನಲ್ಲಿ ಸಲ್ಲಿಸಿರುವ ಚಾಜ್‌ಶೀಟ್‌ನಲ್ಲಿ ಆರೋಪಿಗಳ ಹೆಸರನ್ನು ಸಲ್ಲಿಸಿಲ್ಲ. ಜಿಲ್ಲಾ ನ್ಯಾಯಾಲಯ ಮೇ 24ರಂದು ಚಲನ್‌ನ್ನು ಸ್ವೀಕರಿಸಿದೆ. ಪೂರ್ವನಿರ್ಧರಿತ ಉದ್ದೇಶದಿಂದ ತನಿಖೆ ನಡೆಸಲಾಗಿದೆಯೇ ಎಂದು ನಮ್ಮ ಸರಕಾರ ಪರಿಶೀಲಿಸಲಿದೆ ’’ ಎಂದು ಸರಣಿ ಟ್ವೀಟ್ ಮೂಲಕ ಗೆಹ್ಲೋಟ್ ಸ್ಪಷ್ಟನೆ ನೀಡಲು ಯತ್ನಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News