ಕನ್ನಡದಲ್ಲಿ ಬ್ಯಾಂಕಿಂಗ್ ನೇಮಕಾತಿ ಪರೀಕ್ಷೆ ಬರೆಯಲು ಕೇಂದ್ರ ಅನುಮತಿ

Update: 2019-07-04 16:10 GMT

ಹೊಸದಿಲ್ಲಿ, ಜು.4: ಪ್ರಾದೇಶಿಕ ಗ್ರಾಮೀಣ ಬ್ಯಾಂಕ್ (ಆರ್‌ಆರ್‌ಬಿ)ಗಳಿಗೆ ನೇಮಕಾತಿ ಪರೀಕ್ಷೆ ಇಂಗ್ಲಿಷ್ ಮತ್ತು ಹಿಂದಿಯ ಹೊರತಾಗಿ ಇತರ 13 ಸ್ಥಳೀಯ ಭಾಷೆಗಳಲ್ಲೂ ನಡೆಸಲಾಗುವುದು ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.

ಬ್ಯಾಂಕಿಂಗ್ ಸಿಬ್ಬಂದಿ ಆಯ್ಕೆ ಸಂಸ್ಥೆ (ಐಬಿಪಿಎಸ್) ಈ ಪರೀಕ್ಷೆಗಳನ್ನು ನಡೆಸುತ್ತದೆ. ಸಮಾನ ಅವಕಾಶ ಒದಗಿಸುವ ಮತ್ತು ಸ್ಥಳೀಯ ಯುವಕರಿಗೆ ಉದ್ಯೋಗದ ಅವಕಾಶವನ್ನು ವಿಸ್ತರಿಸುವ ಉದ್ದೇಶದಿಂದ ಆರ್‌ಆರ್‌ಬಿಗಳಿಗೆ ಅಧಿಕಾರಿ (ಸ್ಕೇಲ್1) ಮತ್ತು ಕಚೇರಿ ಸಹಾಯಕರ ಹುದ್ದೆಗೆ ನೇರ ನೇಮಕಾತಿ ಪರೀಕ್ಷೆಯನ್ನು ಇಂಗ್ಲಿಶ್ ಮತ್ತು ಹಿಂದಿಯ ಜೊತೆಗೆ ಇತರ 13 ಸ್ಥಳೀಯ ಭಾಷೆಗಳಲ್ಲಿ ನಡೆಸಲು ನಿರ್ಧರಿಸಲಾಗಿದೆ ಎಂದು ಸೀತಾರಾಮನ್ ತಿಳಿಸಿದ್ದಾರೆ. ಬ್ಯಾಂಕ್ ಪರೀಕ್ಷೆಗಳನ್ನು ಸ್ಥಳೀಯ ಭಾಷೆಗಳಲ್ಲಿ ನಡೆಸಬೇಕೆಂಬ ಆಗ್ರಹ ಇತ್ತೀಚೆಗೆ ಟ್ವಿಟರ್‌ನಲ್ಲಿ ಹರಡಲು ಆರಂಭಿಸಿತ್ತು. ಆರ್‌ಆರ್‌ಬಿ ನೇಮಕಾತಿಗೆ ಅರ್ಜಿ ಹಾಕಲು ಸ್ಥಳೀಯ ಭಾಷೆಯಲ್ಲಿ ನಿರರ್ಗಳತೆ ಒಂದು ಮುಖ್ಯ ಅರ್ಹತೆಯಾಗಿದ್ದರೂ ಇದಕ್ಕೆ ಸಂಬಂಧಿಸಿದ ಪರೀಕ್ಷೆಯನ್ನು ಕೇವಲ ಇಂಗ್ಲಿಷ್ ಮತ್ತು ಹಿಂದಿ ಭಾಷೆಯಲ್ಲಿ ನಡೆಸಲಾಗುತ್ತದೆ ಎಂದು ಕೆಲವರು ಟ್ವಿಟರ್‌ನಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದರು.

ಆಯ್ಕೆ ಪರೀಕ್ಷೆ ಬರೆಯಲು ಸ್ಥಳೀಯ ಭಾಷೆಗಳು ಒಂದು ಮಾಧ್ಯಮವಾಗಿಲ್ಲದಿರುವುದರಿಂದ ಅನೇಕ ಅರ್ಹ ಅಭ್ಯರ್ಥಿಗಳು ಅವಕಾಶ ವಂಚಿತರಾಗಿದ್ದರು. ಇತ್ತೀಚೆಗೆ ಜಾಹೀರಾತು ನೀಡಲಾಗಿದ್ದ ಆರ್‌ಆರ್‌ಬಿ ನೇಮಕಾತಿ ಪ್ರಕ್ರಿಯೆಗೆ ನೋಂದಣಿ ಕಾಲಾವಕಾಶ ಕೊನೆಯಾಗಿದ್ದು ಸದ್ಯ ಅದಕ್ಕೆ ನಡೆಯಲಿರುವ ಪರೀಕ್ಷೆಯಲ್ಲಿ ಈ 13 ಭಾಷೆಗಳನ್ನು ಅಳವಡಿಸಲಾಗುವುದೇ ಎನ್ನುವುದು ಇನ್ನೂ ಸ್ಪಷ್ಟವಾಗಿಲ್ಲ. ಹಾಗೊಂದು ವೇಳೆ ನಡೆದರೆ, ಸಂಸ್ಥೆಯು ಒಂದೋ ಅರ್ಜಿ ಸಲ್ಲಿಸುವ ಅಂತಿಮ ದಿನಾಂಕವನ್ನು ವಿಸ್ತರಿಸಬೇಕು ಅಥವಾ ನೋಂದಾಯಿತ ಅಭ್ಯರ್ಥಿಗಳಿಗೆ ನೂತನವಾಗಿ ಸೇರಿಸಲಾಗಿರುವ ಭಾಷೆಗಳನ್ನು ಆಯ್ಕೆ ಮಾಡುವ ಸೌಲಭ್ಯ ಒದಗಿಸಬೇಕಾಗುತ್ತದೆ.

ಇನ್ನು ಮುಂದೆ ಈ ಪರೀಕ್ಷೆಯನ್ನು ಕನ್ನಡ, ಅಸ್ಸಾಮಿ, ಬೆಂಗಾಳಿ, ಗುಜರಾತಿ, ಕೊಂಕಣಿ, ಮಲಯಾಳಂ,ಮಣಿಪುರಿ, ಮರಾಠಿ, ಒಡಿಯ, ಪಂಜಾಬಿ, ತಮಿಳು, ತೆಲುಗು ಮತ್ತು ಉರ್ದು ಭಾಷೆಯಲ್ಲಿ ನಡೆಸಲಾಗುವುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News