×
Ad

ಮಾನನಷ್ಟ ಮೊಕದ್ದಮೆ: ರಾಹುಲ್ ಗಾಂಧಿಗೆ ಹೊಸ ಸಮನ್ಸ್

Update: 2019-07-09 19:54 IST

 ಅಹ್ಮದಾಬಾದ್, ಜು. 9: ಗೃಹ ಸಚಿವ ಅಮಿತ್ ಶಾ ಅವರನ್ನು ‘ಕೊಲೆ ಆರೋಪಿ’ ಎಂದು ಕರೆದಿರುವುದಕ್ಕೆ ಸ್ಥಳೀಯ ಬಿಜೆಪಿ ನಾಯಕರೊಬ್ಬರು ದಾಖಲಿಸಿದ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ಕುರಿತ ವಿಚಾರಣೆಗೆ ಆಗಸ್ಟ್ 9ರಂದು ಹಾಜರಾಗುವಂತೆ ಸೂಚಿಸಿ ಗುಜರಾತ್ ನ್ಯಾಯಾಲಯ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಗೆ ಹೊಸ ಸಮನ್ಸ್ ಜಾರಿ ಮಾಡಿದೆ.

ರಾಹುಲ್ ಗಾಂಧಿ ಸಂಸತ್ ಸದಸ್ಯರಾಗಿರುವುದರಿಂದ ಅವರಿಗೆ ಮೇ 1ರಂದು ಲೋಕಸಭಾ ಸ್ಪೀಕರ್ ಮೂಲಕ ಸಮನ್ಸ್ ನೀಡಲಾಗಿತ್ತು. ಆದರೆ, ಅದು ಹಿಂದೆ ಬಂದಿತ್ತು. ಬಳಿಕ ಹೆಚ್ಚುವರಿ ಮುಖ್ಯ ಮೆಟ್ರೋಪಾಲಿಟಿನ್ ದಂಡಾಧಿಕಾರಿ ಡಿ.ಎಸ್ ದಾಭ್ರಿ ಈ ಸಮನ್ಸ್ ಅನ್ನು ಮರು ಜಾರಿಗೊಳಿಸಿದ್ದಾರೆ.

ಈ ಬಗ್ಗೆ ತನಗೆ ಯಾವುದೇ ಅಧಿಕಾರ ಇಲ್ಲ ಎಂದು ಹೇಳಿ ಸ್ಪೀಕರ್ ಸಮನ್ಸ್ ಹಿಂದಿರುಗಿಸಿದ್ದರು ಎಂದು ದೂರುದಾರ ಪರ ವಕೀಲ ಪ್ರಕಾಶ್ ಪಟೇಲ್ ಹೇಳಿದ್ದರು. ಆಗಸ್ಟ್ 9ರಂದು ಹಾಜರಾಗುವಂತೆ ನಿರ್ದೇಶಿಸಿ ಈಗ ಹೊಸದಿಲ್ಲಿಯಲ್ಲಿರುವ ರಾಹುಲ್ ಗಾಂಧಿ ಅವರ ನಿವಾಸಕ್ಕೆ ನೇರವಾಗಿ ಸಮನ್ಸ್ ರವಾನಿಸಲಾಗಿದೆ.

 ಜಬಲ್‌ಪುರದಲ್ಲಿ ಎಪ್ರಿಲ್ 23ರಂದು ನಡೆದ ಚುನಾವಣಾ ರ್ಯಾಲಿಯಲ್ಲಿ ರಾಹುಲ್ ಗಾಂಧಿ ಆಕ್ಷೇಪಾರ್ಹ ಹೇಳಿಕೆ ನೀಡಿದ್ದಾರೆ ಎಂದು ಸ್ಥಳೀಯ ಬಿಜೆಪಿ ಕಾರ್ಪೋರೇಟರ್ ಕೃಷ್ಣವದನ್ ಬ್ರಹ್ಮಭಟ್ ಆರೋಪಿಸಿದ್ದರು.

ಸೊಹ್ರಾಬುದ್ದೀನ್ ಎನ್‌ಕೌಂಟರ್ ಪ್ರಕರಣದಲ್ಲಿ 2015ರಲ್ಲಿ ಸಿಬಿಐ ಅಮಿತ್ ಶಾ ಅವರನ್ನು ಖುಲಾಸೆಗೊಳಿಸಿದ ಹೊರತಾಗಿಯೂ ರಾಹುಲ್ ಗಾಂಧಿ ಅವರು ಮಾನ ಹಾನಿಕರ ಹೇಳಿಕೆ ನೀಡಿದ್ದಾರೆ ಎಂದು ಬ್ರಹ್ಮಭಟ್ ಪ್ರತಿಪಾದಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News