ಬಾಬರಿ ಮಸೀದಿ ದ್ವಂಸಗೊಂಡಾಗ ಪಿ.ವಿ. ನರಸಿಂಹ ರಾವ್ ಗಾಢನಿದ್ದೆಯಲ್ಲಿದ್ದರು: ಹೊಸ ಕೃತಿಯಲ್ಲಿ ಸಲ್ಮಾನ್ ಖುರ್ಷಿದ್

Update: 2019-07-11 16:51 GMT

ಹೊಸದಿಲ್ಲಿ,ಜು.11: 1992,ಡಿ.6ರಂದು ಬಾಬರಿ ಮಸೀದಿ ಧ್ವಂಸಗೊಂಡಾಗ ಆಂತರಿಕ ಭದ್ರತೆಯ ಹೊಣೆಗಾರಿಕೆ ಹೊಂದಿದ್ದ ರಾಜೇಶ್ ಪೈಲಟ್ ಅವರು ಅಂದು ಅಯೋಧ್ಯೆಯಲ್ಲಿ ಸೇರಿದ್ದ ಗುಂಪನ್ನು ಚದುರಿಸುವ ಕುರಿತು ಚರ್ಚೆಗಾಗಿ ಆಗಿನ ಪ್ರಧಾನಿ ಪಿ.ವಿ.ನರಸಿಂಹ ರಾವ್ ಅವರನ್ನು ಭೇಟಿಯಾಗಲು ತೆರಳಿದ್ದರು,ಆದರೆ ರಾವ್ ಗಾಢನಿದ್ರೆಯಲ್ಲಿದ್ದರಿಂದ ಅಯೋಧ್ಯೆಯಲ್ಲಿ ಗುಂಪನ್ನು ಚದುರಿಸಲು ಅವರ ಯೋಚನೆಗಳು ‘ಹುಟ್ಟುವಾಗಲೇ ಸತ್ತಿದ್ದವು’ ಎಂದು ಆಗ ರಾವ್ ಸಂಪುಟದಲ್ಲಿ ಕಿರಿಯ ಸಚಿವರಾಗಿದ್ದ ಸಲ್ಮಾನ್ ಖುರ್ಷಿದ್ ಅವರು ನೆನೆಸಿಕೊಂಡಿದ್ದಾರೆ.

‘ವಿಸಿಬಲ್ ಮುಸ್ಲಿಮ್ಸ್, ಇನ್ ವಿಸಿಬಲ್ ಸಿಟಿಝನ್’ ಎಂಬ ತನ್ನ ನೂತನ ಕೃತಿಯಲ್ಲಿ ಖುರ್ಷಿದ್ ಈ ವಿಷಯವನ್ನು ಉಲ್ಲೇಖಿಸಿದ್ದಾರೆ.

ಬಾಬರಿ ಮಸೀದಿ ಧ್ವಂಸದ ಬಳಿಕ ದೇಶದ ವಿವಿಧೆಡೆಗಳಲ್ಲಿ ಕೋಮು ದಂಗೆಗಳು ನಡೆದಿದ್ದವು.

ಮಸೀದಿ ಧ್ವಂಸವು ಕಾನೂನಿನ ಆಡಳಿತಕ್ಕೆ ಪ್ರಶ್ನಾರ್ಥಕ ಚಿಹ್ನೆಯನ್ನು ಮೂಡಿಸಿದ್ದಂತೆ ಕಂಡು ಬಂದಿತ್ತು ಎಂದೂ ಖುರ್ಷಿದ್ ಬರೆದಿದ್ದಾರೆ.

 ‘ನಿವೇಶನದ ಸುತ್ತ ಜನರು ಗುಂಪು ಸೇರುವುದು ಮುಂದುವರಿದಿದ್ದರಿಂದ ಏನಾದರೂ ಮಾಡಿ ಎಂದು ಆಗ್ರಹಿಸಲು ಡಿ.6ರಂದು ಸಂಜೆ ನಾನು ಪೈಲಟ್ ಅವರನ್ನು ಭೇಟಿಯಾಗಿದ್ದೆ. ಕೆಲವು ಕಿರಿಯ ಸಚಿವರು ಪ್ರಧಾನಿಯವರಿಗೆ ಸ್ಥಿತಿಯನ್ನು ಮನವರಿಕೆ ಮಾಡುವುದಾದರೆ ತಾನು ಫೈಝಾಬಾದ್‌ಗೆ ತೆರಳಬೇಕು ಎಂದು ಅವರು ಒಪ್ಪಿಕೊಂಡಿದ್ದರು. ಬಳಿಕ ತಾನು ಸಿ.ಕೆ.ಜಾಫರ್ ಶರೀಫ್ ಬಳಿಗೆ ಧಾವಿಸಿ ಪ್ರಧಾನಿಗೆ ಕರೆ ಮಾಡುವಂತೆ ತಿಳಿಸಿದ್ದೆ. ಅವರು ಕರೆ ಮಾಡಿದಾಗ ಉ.ಪ್ರದೇಶಕ್ಕೆ ಶೀಘ್ರವೇ ತೆರಳುವ ನಿರೀಕ್ಷೆಯಿರುವ ಪ್ರಧಾನ ಕಾರ್ಯದರ್ಶಿಎ.ಎನ್.ವರ್ಮಾ ಅಥವಾ ಗೃಹ ಕಾರ್ಯದರ್ಶಿಯನ್ನು ಭೇಟಿಯಾಗುವಂತೆ ಪ್ರಧಾನಿ ಸೂಚಿಸಿದ್ದರು. ಆದರೆ ವರ್ಮಾರ ಬಳಿ ಕೆಲವು ಪ್ರಶ್ನೆಗಳಿದ್ದವು ಮತ್ತು ತಕ್ಷಣವೇ ತಾನು ಪ್ರಯಾಣ ಕೈಗೊಳ್ಳಬೇಕೇ ಎನ್ನುವುದು ಅವರಿಗೆ ಸ್ಪಷ್ಟವಿರಲಿಲ್ಲ. ಹೀಗಾಗಿ ನಮ್ಮ ಪ್ರತಿಕ್ರಿಯೆ ಏನಿರಬೇಕು ಎಂದು ತಿಳಿಯಲು ನಾವು ಪೈಲಟ್ ಬಳಿ ಮರಳಿದ್ದೆವು. ಸಮಯವು ಸರಿಯುತ್ತಲೇ ಇತ್ತು. ಶರೀಫ್ ಅವರ ಮನೆಗೆ ಕೊನೆಯ ಸುತ್ತು ಹಾಕಿದಾಗ ನಮಗೆ ಉತ್ತರಗಳು ದೊರಕಿದ್ದವು. ಆದರೆ ಅವರು ಪ್ರಧಾನಿಯವರಿಗೆ ಮತ್ತೆ ಕರೆ ಮಾಡಿದಾಗ ಅವರು ಗಾಢ ನಿದ್ರೆಯಲ್ಲಿದ್ದರು” ಎಂದು ಖುರ್ಷಿದ್ ನೆನಪಿಸಿಕೊಂಡಿದ್ದಾರೆ.

ಅದೃಷ್ಟವಶಾತ್ ಮರುದಿನ ವಿಗ್ರಹದ ಮೇಲೆ ಚಾವಣಿಯೊಂದನ್ನು ಹಾಕುವ ಯೋಜನೆ ಇದೆ ಎನ್ನುವುದು ಗೊತ್ತಾದಾಗ ಅರೆ ಮಿಲಿಟರಿ ಪಡೆಗಳು ಹೆಚ್ಚಿನ ಜನರನ್ನು ಅಲ್ಲಿಂದ ಚದುರಿಸುವಲ್ಲಿ ಯಶಸ್ವಿಯಾಗಿದ್ದವು ಎಂದು ಅವರು ಬರೆದಿದ್ದಾರೆ.

 ರೂಪಾ ಪಬ್ಲಿಕೇಷನ್ಸ್ ಹೊರತಂದಿರುವ ಈ ಪುಸ್ತಕವು ಇಸ್ಲಾಮ್‌ನ್ನು ಮುಸ್ಲಿಮೇತರರಿಗೆ ವಿವರಿಸಲು,ಭಾರತೀಯ ಪ್ರಜಾಪ್ರಭುತ್ವದಲ್ಲಿ ಮುಸ್ಲಿಮರಿಗೆ ಅನನ್ಯತೆಯನ್ನು ನೀಡಲು ಮತ್ತು ಸಾಮಾಜಿಕ ಹಾಗೂ ರಾಜಕೀಯ ಸಂದರ್ಭಗಳಲ್ಲಿ ಧರ್ಮಶಾಸ್ತ್ರದಾಚೆಗೆ ಮುಸ್ಲಿಂ ಮನಸ್ಸನ್ನು ಅರ್ಥೈಸಲು ಉದ್ದೇಶಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News