ಅಯೋಧ್ಯೆ ಪ್ರಕರಣ: ಪ್ರಗತಿ ವರದಿ ಸಲ್ಲಿಸಲು ಸಂಧಾನ ಸಮಿತಿಗೆ ಸುಪ್ರೀಂ ಸೂಚನೆ

Update: 2019-07-11 14:43 GMT

ಹೊಸದಿಲ್ಲಿ, ಜು.10: ಅಯೋಧ್ಯೆ ಭೂವಿವಾದ ಪ್ರಕರಣಕ್ಕೆ ಸಂಬಂಧಿಸಿ ರಚಿಸಲಾಗಿರುವ ಸಂಧಾನ ಸಮಿತಿ ತಾನು ನಡೆಸಿರುವ ಮಾತುಕತೆಯ ಪ್ರಗತಿಯ ವರದಿಯನ್ನು ಜುಲೈ 18ರೊಳಗೆ ಸಲ್ಲಿಸಬೇಕೆಂದು ಸುಪ್ರೀಂಕೋರ್ಟ್ ಗುರುವಾರ ಸೂಚಿಸಿದೆ.

ತಾನು ನಡೆಸುತ್ತಿರುವ ಮಾತುಕತೆ ಪೂರ್ಣಗೊಳಿಸಲು ಆಗಸ್ಟ್ 15ರವರೆಗೆ ಸಮಯಾವಕಾಶ ನೀಡಬೇಕೆಂದು ಸಂಧಾನ ಸಮಿತಿ ಈ ಹಿಂದೆ ಕೋರಿಕೆ ಸಲ್ಲಿಸಿತ್ತು. ಇದಕ್ಕೆ ಸುಪ್ರೀಂಕೋರ್ಟ್ ಒಪ್ಪಿಗೆ ನೀಡಿತ್ತು. ಆದರೆ ಈ ಪ್ರಕ್ರಿಯೆಯಲ್ಲಿ ಇದುವರೆಗೆ ನಡೆದಿರುವ ಪ್ರಗತಿಯ ಬಗ್ಗೆ ಜುಲೈ 18ರೊಳಗೆ ವರದಿ ಸಲ್ಲಿಸಬೇಕು ಎಂದು ಸುಪ್ರೀಂಕೋರ್ಟ್‌ನ ನ್ಯಾಯಪೀಠ ಆದೇಶಿಸಿದೆ. ಸುಪ್ರೀಂಕೋರ್ಟ್‌ನ ನಿವೃತ್ತ ನ್ಯಾಯಾಧೀಶ ಎಫ್‌ಎಂ ಕಲೀಫುಲ್ಲಾ ನೇತೃತ್ವದ ಸಂಧಾನ ಸಮಿತಿಯಲ್ಲಿ ಆಧ್ಯಾತ್ಮಿಕ ಗುರು ರವಿಶಂಕರ್ ಹಾಗೂ ಹಿರಿಯ ನ್ಯಾಯವಾದಿ ಶ್ರೀರಾಮ್ ಪಂಚು ಸದಸ್ಯರಾಗಿದ್ದಾರೆ.

  ಸಂಧಾನ ಸಮಿತಿಯಿಂದ ಈ ವಿವಾದಕ್ಕೆ ಪರಿಹಾರ ಕಂಡುಕೊಳ್ಳಲು ಸಾಧ್ಯವಿಲ್ಲ ಎಂದು ಕಂಡುಬಂದರೆ, ಜುಲೈ 25ರಿಂದ ಸುಪ್ರೀಂಕೋರ್ಟ್‌ನಲ್ಲಿ ಅಯೋಧ್ಯೆ ವಿವಾದದ ವಿಚಾರಣೆ ಪ್ರತೀದಿನ ನಡೆಯಲಿದೆ ಎಂದು ಮುಖ್ಯ ನ್ಯಾಯಾಧೀಶ ರಂಜನ್ ಗೊಗೊಯಿ ನೇತೃತ್ವದ ನ್ಯಾಯಪೀಠ ತಿಳಿಸಿದೆ. ಸಂಧಾನ ಸಮಿತಿಯ ಕಾರ್ಯದಲ್ಲಿ ಯಾವುದೇ ಪ್ರಗತಿಯಾಗಿಲ್ಲ . ಆದ್ದರಿಂದ ಅಯೋಧ್ಯೆ ವಿವಾದದ ವಿಚಾರಣೆಯನ್ನು ಸುಪ್ರೀಂಕೋರ್ಟ್ ಶೀಘ್ರ ಆರಂಭಿಸಬೇಕೆಂದು ಕೋರಿ ಅಯೋಧ್ಯೆ ಪ್ರಕರಣದ ವಾದಿಗಳಲ್ಲಿ ಒಬ್ಬರಾದ ಗೋಪಾಲ್‌ಸಿಂಗ್ ವಿಶಾರದ ಎಂಬವರು ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News