ಎಲ್ಲಾ ಅಕ್ರಮ ವಲಸಿಗರನ್ನು ಗುರುತಿಸಿ ಗಡೀಪಾರು ಮಾಡುತ್ತೇವೆ: ಅಮಿತ್ ಶಾ

Update: 2019-07-17 15:07 GMT

ಹೊಸದಿಲ್ಲಿ, ಜು.17: ದೇಶದ ಯಾವುದೇ ಪ್ರದೇಶದಲ್ಲಿ ವಾಸಿಸುತ್ತಿರುವ ಅಕ್ರಮ ವಲಸಿಗರನ್ನು ಗುರುತಿಸಿ ಅವರನ್ನು ಅಂತರಾಷ್ಟ್ರೀಯ ಕಾನೂನಿನಂತೆ ಸರಕಾರ ಗಡೀಪಾರು ಮಾಡಲಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ರಾಜ್ಯಸಭೆಯಲ್ಲಿ ಹೇಳಿದ್ದಾರೆ.

ಸಮಾಜವಾದಿ ಪಕ್ಷದ ಸದಸ್ಯ ಜಾವೇದ್ ಆಲಿಖಾನ್ ಅವರ ಪೂರಕ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಶಾ, ರಾಷ್ಟ್ರೀಯ ಪೌರತ್ವ ನೋಂದಣಿ(ಎನ್‌ಆರ್‌ಸಿ)ಯನ್ನು ಇತರ ರಾಜ್ಯಗಳಲ್ಲೂ ಜಾರಿಗೊಳಿಸಲಾಗುವುದು ಎಂದು ಹೇಳಿದರು. ಇದೊಂದು ಒಳ್ಳೆಯ ಪ್ರಶ್ನೆ. ಎನ್‌ಆರ್‌ಸಿ ಅಸ್ಸಾಂ ಒಪ್ಪಂದದ ಭಾಗವಾಗಿದೆ ಮತ್ತು ಇದು ಬಿಜೆಪಿಯ ಚುನಾವಣಾ ಪ್ರಣಾಳಿಕೆಯಲ್ಲಿದೆ. ಅಕ್ರಮ ವಲಸಿಗರನ್ನು ದೇಶದ ಮೂಲೆಮೂಲೆಯಲ್ಲೂ ಗುರುತಿಸಿ ಅಂತರಾಷ್ಟ್ರೀಯ ಕಾನೂನಿನಂತೆ ಗಡೀಪಾರು ಮಾಡಲಾಗುವುದು. ಈಗ ಅಸ್ಸಾಂನಲ್ಲಿ ಸುಪ್ರೀಂಕೋರ್ಟ್‌ನ ಕಟ್ಟುನಿಟ್ಟಾದ ಉಸ್ತುವಾರಿಯಲ್ಲಿ ಎನ್‌ಆರ್‌ಸಿಯನ್ನು ನವೀಕರಿಸಲಾಗುತ್ತಿದ್ದು ನೋಂದಾಯಿತ ಅಂಕಿಅಂಶದ ಅಂತಿಮ ಪ್ರಕಟಣೆಗೆ ಜುಲೈ 31 ಅಂತಿಮ ಗಡುವಾಗಿರುತ್ತದೆ ಎಂದವರು ಹೇಳಿದರು.

ಅಸ್ಸಾಂನಲ್ಲಿ ಎನ್‌ಆರ್‌ಸಿ ಅಂತಿಮ ಗಡುವನ್ನು ವಿಸ್ತರಿಸಲು ಕೋರಿ ಸುಮಾರು 25 ಲಕ್ಷ ಜನ ಸಹಿಹಾಕಿದ ಅರ್ಜಿಯನ್ನು ಕೇಂದ್ರಕ್ಕೆ ಮತ್ತು ರಾಷ್ಟ್ರಪತಿಯವರಿಗೆ ಸಲ್ಲಿಸಲಾಗಿದೆ. ಕೆಲವು ನೈಜ ಹೆಸರು ಪಟ್ಟಿಯಿಂದ ಹೊರಗುಳಿದಿರುವುದರಿಂದ, ಗಡುವನ್ನು ವಿಸ್ತರಿಸಲು ಕೋರಿ ಕೇಂದ್ರ ಸರಕಾರ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ. ಸ್ವಲ್ಪ ವಿಳಂಬವಾಗಬಹುದು, ಆದರೆ ಯಾವುದೇ ತಪ್ಪಿಲ್ಲದ ಎನ್‌ಆರ್‌ಸಿಯನ್ನು ಅನುಷ್ಠಾನಗೊಳಿಸಲಾಗುವುದು ಎಂದವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News