ದಲಿತ ಬಾಲಕಿಯ ಅತ್ಯಾಚಾರ ಆರೋಪಿಯನ್ನು ಭಾರತಕ್ಕೆ ಕರೆತರಲು ಸೌದಿಗೆ ತೆರಳಿದ ಕೇರಳ ಪೊಲೀಸರು

Update: 2019-07-17 15:09 GMT

ತಿರುವನಂತಪುರಂ, ಜು.17: ಕೇರಳದಲ್ಲಿ 13 ವರ್ಷದ ದಲಿತ ಬಾಲಕಿಯ ಮೇಲೆ ಅತ್ಯಾಚಾರ ನಡೆಸಿ ಬಳಿಕ ಸೌದಿ ಅರೇಬಿಯಾದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಭಾರತಕ್ಕೆ ಕರೆತರುವ ನಿಟ್ಟಿನಲ್ಲಿ ಕೇರಳದ ಕೊಲ್ಲಂ ಪೊಲೀಸ್ ಆಯುಕ್ತೆ ಮೆರಿನ್ ಜೋಸೆಫ್ ಮತ್ತವರ ತಂಡ ಸೌದಿ ಅರೇಬಿಯಾದ ರಿಯಾದ್‌ಗೆ ತೆರಳಿದೆ ಎಂದು ವರದಿಯಾಗಿದೆ.

ಸೌದಿ ಅರೇಬಿಯಾದಲ್ಲಿ ಉದ್ಯೋಗಿಯಾಗಿದ್ದ ಕೊಲ್ಲಂ ನಿವಾಸಿ ಸುನಿಲ್ ಕುಮಾರ್ ಎಂಬಾತ 2017ರಲ್ಲಿ ರಜೆಕಳೆಯಲು ಭಾರತಕ್ಕೆ ಬಂದಿದ್ದ ಸಂದರ್ಭ ತನ್ನ ಸ್ನೇಹಿತನ ಸಹೋದರನ ಪುತ್ರಿ, 13 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ನಡೆಸಿ ಬಳಿಕ ಸೌದಿಗೆ ತೆರಳಿ ತಲೆಮರೆಸಿಕೊಂಡಿದ್ದ. ಬಾಲಕಿ ವಿಷಯವನ್ನು ಮನೆಯವರಲ್ಲಿ ಹೇಳಿದಾಗ ಪ್ರಕರಣ ದಾಖಲಿಸಲಾಗಿತ್ತು ಹಾಗೂ ಸುನಿಲ್ ಪತ್ತೆಗಾಗಿ ಇಂಟರ್‌ಪೋಲ್ ನೋಟಿಸ್ ಜಾರಿಯಾಗಿತ್ತು. ಈ ಮಧ್ಯೆ ಅತ್ಯಾಚಾರಕ್ಕೆ ಒಳಗಾದ ಬಾಲಕಿ ಹಾಗೂ ಆಕೆಯನ್ನು ಸುನಿಲ್‌ಗೆ ಪರಿಚಯಿಸಿದ್ದ ಅವಳ ಸಂಬಂಧಿ ಯುವಕ ಇಬ್ಬರೂ ಆತ್ಮಹತ್ಯೆ ಮಾಡಿಕೊಂಡಿದ್ದರು. ಬಳಿಕ ಈ ಪ್ರಕರಣ ನೆನೆಗುದಿಗೆ ಬಿದ್ದಿತ್ತು.

2019ರ ಜೂನ್‌ನಲ್ಲಿ ಕೊಲ್ಲಂನ ಪೊಲೀಸ್ ಕಮಿಷನರ್ ಆಗಿ ನೇಮಗೊಂಡ ಮೆರಿನ್ ಜೋಸೆಫ್, ಬಾಲಕಿ ಅತ್ಯಾಚಾರ ಪ್ರಕರಣದ ಆರೋಪಿಗೆ ಶಿಕ್ಷೆಯಾಗಲೇ ಬೇಕು ಎಂದು ಪಣತೊಟ್ಟು ಈ ಪ್ರಕರಣದ ಬೆನ್ನು ಬಿದ್ದರು. ಇವರ ನಿರಂತರ ಪ್ರಯತ್ನಕ್ಕೆ ಕಡೆಗೂ ಫಲ ದೊರಕಿದ್ದು ಸುನಿಲ್‌ನನ್ನು ಬಂಧಿಸಿ ಜೈಲಿನಲ್ಲಿಟ್ಟಿರುವುದಾಗಿ ಕೆಲ ದಿನಗಳ ಹಿಂದೆ ಸೌದಿ ಪೊಲೀಸರು ಕೇರಳ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಇಂತಹ ಪ್ರಕರಣಗಳಲ್ಲಿ ಹೆಚ್ಚಾಗಿ ಹಿರಿಯ ಪೊಲೀಸ್ ಅಧಿಕಾರಿಗಳು ತೆರಳದೆ ಕಿರಿಯ ಅಧಿಕಾರಿಗಳನ್ನು ಕಳುಹಿಸುತ್ತಾರೆ. ಆದರೆ ಅಪ್ರಾಪ್ತ ವಯಸ್ಸಿನ ಬಾಲಕಿಯ ಸಾವಿಗೆ ಕಾರಣವಾಗಿರುವ ವ್ಯಕ್ತಿಯನ್ನು ಭಾರತಕ್ಕೆ ಕರೆತಂದು ಈ ನೆಲದ ಕಾನೂನಿನಂತೆ ಕಠಿಣ ಶಿಕ್ಷೆ ವಿಧಿಸಲೇಬೇಕು ಎಂದು ನಿರ್ಧರಿಸಿರುವ ಮೆರಿನ್ ತಮ್ಮ ತಂಡದೊಂದಿಗೆ ರಿಯಾದ್‌ಗೆ ತೆರಳಿ, ಸುನಿಲ್‌ನನ್ನು ವಶಕ್ಕೆ ಪಡೆದು ಭಾರತಕ್ಕೆ ಕರೆತರುವ ನಿಟ್ಟಿನಲ್ಲಿ ಅಲ್ಲಿನ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸುತ್ತಿದ್ದಾರೆ. ಕೇರಳದಲ್ಲಿ ಅಪರಾಧ ಕೃತ್ಯ ಎಸಗಿದ್ದಕ್ಕಾಗಿ ವಿದೇಶದಿಂದ ಭಾರತಕ್ಕೆ ಹಸ್ತಾಂತರವಾಗುವ ಪ್ರಪ್ರಥಮ ವ್ಯಕ್ತಿಯಾಗಲಿದ್ದಾನೆ ಸುನಿಲ್ ಕುಮಾರ್.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News