ಆರೆಸ್ಸೆಸ್ ಕುರಿತ ಮಾಹಿತಿ ಸಂಗ್ರಹಿಸಿ ವರದಿ ನೀಡಲು ಬಿಹಾರ ಸರಕಾರದ ಆದೇಶ: ಬಿಜೆಪಿ ಖಂಡನೆ

Update: 2019-07-17 16:08 GMT

ಪಾಟ್ನ, ಜು.17: ಆರೆಸ್ಸೆಸ್ ಮತ್ತು ಅದರ ಅಂಗಸಂಸ್ಥೆಗಳ ಬಗ್ಗೆ ಬಿಹಾರ ಪೊಲೀಸರು ಮಾಹಿತಿಯನ್ನು ಸಂಗ್ರಹಿಸುತ್ತಿದ್ದಾರೆ. ರಾಜ್ಯದ ಗೃಹ ಇಲಾಖೆಯ ಸೂಚನೆಯಂತೆ ಆರೆಸ್ಸೆಸ್ ಮತ್ತು ಅದಕ್ಕೆ ಸಂಬಂಧಿಸಿದ 19 ಸಂಘಟನೆಗಳ ಬಗ್ಗೆ ಮಾಹಿತಿ ಕಲೆಹಾಕಲಾಗುತ್ತಿದೆ ಎಂದು ವರದಿಯಾಗಿದೆ. ಇದರೊಂದಿಗೆ ನಿತೀಶ್ ಕುಮಾರ್ ನೇತೃತ್ವದ ಜೆಡಿಯು ಹಾಗೂ ಬಿಜೆಪಿ ನಡುವಿನ ಮನಸ್ತಾಪ ಮತ್ತೊಂದು ಹಂತಕ್ಕೆ ತಲುಪಿದೆ ಎಂದು ವಿಶ್ಲೇಷಿಸಲಾಗಿದೆ.

 ಒಂದು ವಾರದೊಳಗೆ ವಿವರ ಸಂಗ್ರಹಿಸುವಂತೆ ಎಲ್ಲಾ ಉಪ ಅಧೀಕ್ಷಕರಿಗೆ ಸ್ಪೆಷಲ್ ಬ್ರಾಂಚ್ ಪೊಲೀಸ್‌ನ ಹಿರಿಯ ಅಧಿಕಾರಿ ಪತ್ರ ಬರೆದಿದ್ದಾರೆ. ಗೃಹ ಇಲಾಖೆಯ ಹೆಚ್ಚುವರಿ ಹೊಣೆ ಹೊತ್ತಿರುವ ಮುಖ್ಯಮಂತ್ರಿ ನಿತೀಶ್ ಕುಮಾರ್, ಗೃಹ ಇಲಾಖೆ ಹಾಗೂ ಸ್ಪೆಷಲ್ ಬ್ರಾಂಚ್‌ನ ಮೇಲ್ವಿಚಾರಣೆ ನಡೆಸುತ್ತಿದ್ದಾರೆ. ಈ ನಿರ್ಧಾರದ ಬಗ್ಗೆ ಬಿಜೆಪಿ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಈ ರೀತಿಯ ಪತ್ರ ಬರೆಯುವ ಅಗತ್ಯವೇ ಇರಲಿಲ್ಲ ಎಂದು ಬಿಹಾರ ವಿಧಾನಪರಿಷತ್ ಸದಸ್ಯ, ಬಿಜೆಪಿ ಮುಖಂಡ ಸಂಜಯ್ ಮಯೂಖ್ ವಿಧಾನಪರಿಷತ್‌ನಲ್ಲಿ ಹೇಳಿಕೆ ನೀಡಿದ್ದಾರೆ.

 ಸ್ಪೆಷಲ್ ಬ್ರಾಂಚ್ ಪೊಲೀಸರು ಬರೆದಿರುವ ಪತ್ರದಲ್ಲಿ ಮೇ 28ರ ದಿನಾಂಕ ನಮೂದಿಸಲಾಗಿದೆ. ಇದಕ್ಕೆ ಕೆಲವೇ ದಿನಗಳ ಮೊದಲು ನಿತೀಶ್ ಕುಮಾರ್ ನೇತೃತ್ವದ ಜೆಡಿಯು ಹಾಗೂ ಬಿಜೆಪಿ ನಡುವೆ ಮನಸ್ತಾಪ ಆರಂಭವಾಗಿರುವುದನ್ನು ಇಲ್ಲಿ ಉಲ್ಲೇಖಿಸಬಹುದು. ಕೇಂದ್ರ ಸಚಿವ ಸಂಪುಟದಲ್ಲಿ ತಮ್ಮ ಪಕ್ಷಕ್ಕೆ ಕಡಿಮೆ ಪ್ರಾತಿನಿಧ್ಯ ದೊರಕಿರುವುದನ್ನು ವಿರೋಧಿಸಿ ಜೆಡಿಯು ಸಂಪುಟದಿಂದ ಹೊರಬಂದಿತ್ತು ಮತ್ತು ಬಳಿಕ ಉಭಯ ಪಕ್ಷಗಳ ನಡುವಿನ ಸಂಬಂಧ ಹಳಸಿತ್ತು. ಇದೊಂದು ಸಹಜ ಪ್ರಕ್ರಿಯೆ. ಇದರಲ್ಲಿ ಯಾವುದೇ ವಿಶೇಷವಿಲ್ಲ ಎಂದು ರಾಜ್ಯದ ಗೃಹ ಇಲಾಖೆ ಹೇಳಿದೆ. ಈ ಮಧ್ಯೆ ಹೇಳಿಕೆ ನೀಡಿರುವ ಆರ್‌ಜೆಡಿ ಪಕ್ಷವು, ಬಿಜೆಪಿಯ ಸೈದ್ಧಾಂತಿಕ ಮಾರ್ಗದರ್ಶಿಯಾಗಿರುವ ಆರೆಸ್ಸಸ್ ಅನ್ನು ನಿಷೇಧಿಸಬೇಕೆಂದು ಆಗ್ರಹಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News