ನೀರಿನ ಕೊರತೆ: ಅರ್ಧ ಲೋಟ ನೀರು ಕುಡಿಯಿರಿ ಎಂದಿದೆ ಈ ರಾಜ್ಯ ಸರಕಾರ !

Update: 2019-07-19 15:53 GMT

ಲಕ್ನೊ,ಜು.19: ಮುಂದಿನ ದಶಕದ ಒಳಗೆ ಕುಡಿಯುವ ನೀರಿನ ಕೊರತೆ ಇನ್ನಷ್ಟು ಉಲ್ಬಣಿಸುತ್ತದೆ ಎಂದು ತಜ್ಞರು ಎಚ್ಚರಿಕೆ ನೀಡಿರುವ ಹಿನ್ನೆಲೆಯಲ್ಲಿ ನೀರು ಪೋಲಾಗುವುದನ್ನು ತಪ್ಪಿಸಲು ಅರ್ಧ ಲೋಟ ನೀರು ನೀತಿಯನ್ನು ಜಾರಿಗೆ ತಂದಿರುವ ಉತ್ತರ ಪ್ರದೇಶ ಸರಕಾರ, ಒಂದು ಸಮಯಕ್ಕೆ ಕೇವಲ ಅರ್ಧ ಲೋಟ ನೀರು ಕುಡಿಯುವಂತೆ ಸಲಹೆ ನೀಡಿದೆ.

ತಕ್ಷಣ ಜಾರಿಗೆ ಬಂದಿರುವ ಆದೇಶದಲ್ಲಿ, ರಾಜ್ಯದ ಎಲ್ಲ ಕಚೇರಿಗಳು ಮತ್ತು ಕ್ಯಾಂಟೀನ್‌ಗಳಲ್ಲಿ ಅರ್ಧ ಲೋಟ ನೀರು ನೀಡುವಂತೆ ವಿಧಾನ ಸಭೆಯ ಮುಖ್ಯ ಕಾರ್ಯದರ್ಶಿ ಪ್ರದೀಪ್ ದುಬೆ ಸೂಚಿಸಿದ್ದಾರೆ. ಬಹುತೇಕ ಜನರು ಲೋಟಗಳಲ್ಲಿ ನೀರನ್ನು ಬಾಕಿಯುಳಿಸುತ್ತಾರೆ. ಹಾಗಾಗಿ ಅರ್ಧ ತುಂಬಿದ ನೀರಿನ ಲೋಟಗಳನ್ನು ನೀಡಲಾಗುವುದು. ಯಾರಿಗೆ ಹೆಚ್ಚು ನೀರು ಬೇಕೋ ಅವರು ಕೇಳಿ ಪಡೆಯಬಹುದು ಎಂದು ದುಬೆ ತಿಳಿಸಿದ್ದಾರೆ.

ಈ ಆದೇಶದಿಂದ ನಾಲ್ಕನೇ ದರ್ಜೆ ಉದ್ಯೋಗಿಗಳ ಕೆಲಸದ ಒತ್ತಡವನ್ನು ಹೆಚ್ಚಿಸಲಿದೆ. ಮುಖ್ಯವಾಗಿ ಬೇಸಿಗೆ ಸಮಯದಲ್ಲಿ ಜನರು ಹೆಚ್ಚು ನೀರು ಕುಡಿಯುವುದರಿಂದ ಈ ಉದ್ಯೋಗಿಗಳು ಎರಡನೇ ಲೋಟದೊಂದಿಗೆ ಸಿದ್ಧವಾಗಿರಬೇಕಾಗುತ್ತದೆ ಎಂದು ಕೆಲವರು ಅಭಿಪ್ರಾಯಿಸಿದ್ದಾರೆ. ಮಹಾರಾಷ್ಟ್ರದಲ್ಲಿ ಕೆಲವು ಹೋಟೆಲ್‌ಗಳು ನೀರನ್ನು ಸಂರಕ್ಷಿಸುವ ಉದ್ದೇಶದಿಂದ ಈಗಾಗಲೇ ಅರ್ಧ ಲೋಟ ನೀರು ನೀತಿಯನ್ನು ಅಳವಡಿಸಿಕೊಂಡಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News