ಈ ರಾಜ್ಯದಲ್ಲಿ ನಾಮನಿರ್ದೇಶನದಲ್ಲೂ ಮೀಸಲಾತಿ!

Update: 2019-07-20 04:13 GMT

ಅಮರಾವತಿ, ಜು.20: ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ, ಹಿಂದುಳಿದ ವರ್ಗ ಹಾಗೂ ಅಲ್ಪಸಂಖ್ಯಾತರಿಗೆ ಸರ್ಕಾರದ ನಾಮನಿರ್ದೇಶನ ಹುದ್ದೆಗಳನ್ನೂ ಶೇಕಡ 50ರಷ್ಟು ಮೀಸಲಾತಿ ನೀಡುವ ನಿರ್ಧಾರವನ್ನು ಆಂಧ್ರ ಪ್ರದೇಶ ಸರ್ಕಾರ ಶುಕ್ರವಾರ ಕೈಗೊಂಡಿದೆ. ಅಂತೆಯೇ ಶೇಕಡ 50ರಷ್ಟು ಗುತ್ತಿಗೆಯನ್ನು ಕೂಡಾ ದುರ್ಬಲ ವರ್ಗದ ಮಹಿಳೆಯರಿಗೆ ನೀಡಲು ನಿರ್ಧರಿಸಲಾಗಿದೆ.

ಮುಖ್ಯಮಂತ್ರಿ ವೈ.ಎಸ್.ಜಗನ್‌ಮೋಹನ ರೆಡ್ಡಿ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಐತಿಹಾಸಿಕ ನಿರ್ಧಾರ ಕೈಗೊಳ್ಳಲಾಗಿದೆ. ಸರ್ಕಾರದ ನಿಗಮ, ಮಂಡಳಿ, ಸೊಸೈಟಿ, ಟ್ರಸ್ಟ್‌ಗಳು ಹಾಗೂ ಮಾರುಕಟ್ಟೆ ಸಮಿತಿಗಳ ನಾಮನಿರ್ದೇಶನದಲ್ಲಿ ಪರಿಶಿಷ್ಟ ಜಾತಿ ಹಾಗೂ ವರ್ಗಕ್ಕೆ, ಹಿಂದುಳಿದವರಿಗೆ ಮತ್ತು ಅಲ್ಪಸಂಖ್ಯಾತರಿಗೆ ಮೀಸಲಾಗಿರುತ್ತದೆ. ಅಂತೆಯೇ ದೇವಸ್ಥಾನ ಸಮಿತಿಗಳನ್ನೂ ಶೇಕಡ 50 ಮೀಸಲಾತಿ ನೀಡಲು ಸಭೆ ನಿರ್ಧರಿಸಿದೆ. ಶೇಕಡ 50ರಷ್ಟು ಗುತ್ತಿಗೆಗಳನ್ನು ದುರ್ಬಲ ವರ್ಗದ ಮಹಿಳೆಯರಿಗೆ ನೀಡಲಾಗುವುದು ಎಂದು ಅಧಿಕಾರಿಗಳು ವಿವರಿಸಿದ್ದಾರೆ.

ಧೋಬಿಗಳು, ಕ್ಷೌರಿಕರು ಮತ್ತು ದರ್ಜಿಗಳಿಗೆ ವಾರ್ಷಿಕ 10 ಸಾವಿರ ರೂಪಾಯಿ ನೆರವು ನೀಡಲು ಕೂಡಾ ಸರ್ಕಾರ ನಿರ್ಧರಿಸಿದೆ. ಪರಿಶಿಷ್ಟ ಜಾತಿ ಕುಟುಂಬಗಳಿಗೆ ಮಾಸಿಕ 200 ರೂಪಾಯಿವರೆಗೆ ವಿದ್ಯುತ್ ಬಿಲ್ ಭರಿಸಲು ಸರ್ಕಾರ ತೀರ್ಮಾನ ಕೈಗೊಂಡಿದ್ದು, ಇದರಿಂದ 15.62 ಲಕ್ಷ ಕುಟುಂಬಗಳಿಗೆ ನೆರವಾಗಲಿದೆ. ಸರ್ಕಾರಕ್ಕೆ 411 ಕೋಟಿ ರೂಪಾಯಿ ಹೆಚ್ಚುವರಿ ಹೊರೆ ಬೀಳಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ನಿರುದ್ಯೋಗ ನಿವಾರಣೆ ಕ್ರಮವಾಗಿ ಕೈಗಾರಿಕೆಗಳಲ್ಲಿ ಶೇಕಡ 75ರಷ್ಟು ಹುದ್ದೆಗಳನ್ನು ಸ್ಥಳೀಯರಿಗೆ ನೀಡಲು ಕೂಡಾ ಸರ್ಕಾರ ನಿರ್ಧರಿಸಿದೆ. ಕೈಗಾರಿಕೆಗಳ ಅಭಿವೃದ್ಧಿಗಾಗಿ ಭೂಮಿ ಕಳೆದುಕೊಂಡವರ ಕುಟುಂಬಗಳಿಗೆ ಉದ್ಯೋಗ ಒದಗಿಸುವ ಸಂಬಂಧ ಕಾನೂನು ಜಾರಿಗೊಳಿಸಲೂ ಸರ್ಕಾರ ಮುಂದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News