ಕರ್ನಾಟಕದಲ್ಲಿ ಸಮ್ಮಿಶ್ರ ಸರ್ಕಾರ ಪತನ: ರಾಹುಲ್‌ ಗಾಂಧಿ ಹೇಳಿದ್ದೇನು ?

Update: 2019-07-24 03:45 GMT

ಹೊಸದಿಲ್ಲಿ: ಕರ್ನಾಟಕದಲ್ಲಿ ಕಾಂಗ್ರೆಸ್- ಜೆಡಿಎಸ್ ಮೈತ್ರಿ ಸರ್ಕಾರ ಪತನಕ್ಕೆ ಪಟ್ಟಭದ್ರ ಹಿತಾಸಕ್ತಿಗಳ ದುರಾಸೆ ಕಾರಣ ಎಂದು ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್‌ ಗಾಂಧಿ ಹೇಳಿದ್ದಾರೆ.

ಕಳೆದ ವರ್ಷದ ಮೇ ತಿಂಗಳಲ್ಲಿ ನಡೆದ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಅತಂತ್ರ ಪರಿಸ್ಥಿತಿ ನಿರ್ಮಾಣವಾಗಿದ್ದರಿಂದ, ಬಿಜೆಪಿಯನ್ನು ಅಧಿಕಾರದಿಂದ ಹೊರಗಿಡುವ ಸಲುವಾಗಿ ಕಾಂಗ್ರೆಸ್- ಜೆಡಿಎಸ್ ಮೈತ್ರಿ ಮಾಡಿಕೊಂಡಿದ್ದವು.

ಆದರೆ 13 ಮಂದಿ ಕಾಂಗ್ರೆಸ್ ಹಾಗೂ ಮೂವರು ಜೆಡಿಎಸ್ ಸದಸ್ಯರು ರಾಜೀನಾಮೆ ನೀಡಿದ ಹಿನ್ನೆಲೆಯಲ್ಲಿ ವಿಶ್ವಾಸಮತ ಯಾಚಿಸುವ ಪರಿಸ್ಥಿತಿ ನಿರ್ಮಾಣವಾಗಿತ್ತು. ವಿಶ್ವಾಸಮತದ ಪರ 99 ಹಾಗೂ ವಿರುದ್ಧ 105 ಮತಗಳು ಚಲಾವಣೆಯಾದ ಹಿನ್ನೆಲೆಯಲ್ಲಿ ಸರ್ಕಾರ ಪತನವಾಯಿತು.
ಸರ್ಕಾರ ಪತನದ ಬಳಿಕ ಟ್ವೀಟ್ ಮಾಡಿರುವ ರಾಹುಲ್ ಬಿಜೆಪಿಯನ್ನು ಎಲ್ಲೂ ಹೆಸರಿಸಿಲ್ಲ.

"ಮೊದಲ ದಿನದಿಂದಲೂ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರವನ್ನು ಒಳಗಿನ ಹಾಗೂ ಹೊರಗಿನ ಪಟ್ಟಭದ್ರ ಹಿತಾಸಕ್ತಿಗಳು ಗುರಿ ಮಾಡಿದ್ದರು. ಈ ಮೈತ್ರಿ ತಮಗೆ ಯಾವಾಗಲೂ ಅಪಾಯ ಹಾಗೂ ಅಧಿಕಾರದ ಹಾದಿಗೆ ತಡೆ ಎನ್ನುವುದು ಅವರ ಅಭಿಪ್ರಾಯವಾಗಿತ್ತು. ಇಂದು ದುರಾಸೆ ಗೆದ್ದಿದೆ. ಪ್ರಜಾಪ್ರಭುತ್ವ, ಪ್ರಾಮಾಣಿಕತೆ ಹಾಗೂ ಕರ್ನಾಟಕದ ಜನತೆ ಸೋತಿದ್ದಾರೆ" ಎಂದು ಟ್ವೀಟ್ ಮಾಡಿದ್ದಾರೆ.

ರಾಹುಲ್ ಟೀಕೆಯನ್ನು ಕರ್ನಾಟಕ ಬಿಜೆಪಿ ಖಂಡಿಸಿದ್ದು, "ಅಧಿಕಾರವನ್ನು ಹಿಡಿದಿಟ್ಟುಕೊಳ್ಳಲು ನಡೆಸಿದ ನಿಮ್ಮ ಹತಾಶ ಪ್ರಯತ್ನಕ್ಕೆ ಇಂದು ಸೋಲಾಗಿದೆ" ಎಂದು ಟ್ವೀಟ್ ಮೂಲಕ ಪ್ರತಿಕ್ರಿಯಿಸಿದೆ.

ಅಪವಿತ್ರ ಮೈತ್ರಿ ಹಾಗೂ ಅಧಿಕಾರದ ದುರಾಸೆಯ ವಿರುದ್ಧ ಕರ್ನಾಟಕದ ಜಯ ಇದಾಗಿದೆ. ಪ್ರಜಾಪ್ರಭುತ್ವ ಇಂದು ಗೆದ್ದಿದೆ. ಜನಮತ ಸ್ಥಾಪನೆಯಾಗಿದೆ ಎಂದು ಸಮರ್ಥಿಸಿಕೊಂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News