×
Ad

ಶೌಚಾಲಯದೊಳಗೆ ಅಡುಗೆ ಮಾಡುವುದರಲ್ಲಿ ತಪ್ಪಿಲ್ಲ ಎಂದ ಸಚಿವೆ!

Update: 2019-07-24 15:44 IST

ಭೋಪಾಲ್, ಜು.24: ಮಧ್ಯ ಪ್ರದೇಶದ ಶಿವಪುರಿ ಎಂಬಲ್ಲಿನ ಅಂಗನವಾಡಿ ಕೇಂದ್ರದಲ್ಲಿನ ಶೌಚಾಲಯವನ್ನೇ ಮಕ್ಕಳಿಗೆ ಆಹಾರ ತಯಾರಿಸಲು ಅಡುಗೆ ಕೋಣೆಯನ್ನಾಗಿ ಬಳಸಲಾಗುತ್ತಿದೆ ಎಂಬ ಸುದ್ದಿ ಎಲ್ಲರಿಗೂ ಆಘಾತ ತಂದಿದ್ದರೆ, ರಾಜ್ಯದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಇಮಾರ್ತಿ ದೇವಿ ನೀಡಿದ ಹೇಳಿಕೆ ಇನ್ನಷ್ಟು ಆಘಾತಕಾರಿಯಾಗಿದೆ.

“ಶೌಚಾಲಯದೊಳಗೆ ಅಡುಗೆ ಮಾಡುವುದರಲ್ಲಿ ತಪ್ಪೇನೂ ಇಲ್ಲ'' ಎಂದು ಸಚಿವೆ ಹೇಳಿ ಎಲ್ಲರ ಹುಬ್ಬೇರಿಸಿದ್ದಾರೆ.

“ಶೌಚಾಲಯ ಹಾಗೂ ಅಡುಗೆ ಕೋಣೆಯ ನಡುವೆ ವಿಭಜನೆ ಇದ್ದರೆ ಅಲ್ಲಿ ಆಹಾರ ತಯಾರಿಸುವುದರಲ್ಲಿ ತಪ್ಪೇನೂ ಇಲ್ಲ'' ಎಂದು ಸುದ್ದಿ ಸಂಸ್ಥೆಯೊಂದರ ಜತೆ ಮಾತನಾಡುತ್ತಾ ಅವರು ಹೇಳಿದ್ದಾರೆ. “ಇತ್ತೀಚೆಗೆ ನಮ್ಮ ಮನೆಗಳಲ್ಲೂ ಅಟಾಚ್ಡ್ ಬಾತ್‍ ರೂಂಗಳಿರುತ್ತವೆ'' ಎಂದೂ ಆಕೆ ಹೇಳಿದ್ದಾರೆ.

ಶಿವಪುರಿ ಜಿಲ್ಲೆಯ ಸಿಲನಗರ್ ಪೊಖರ್ ಎಂಬಲ್ಲಿನ  ಅಂಗನವಾಡಿ ಕೇಂದ್ರದಲ್ಲಿ  ಶೌಚಾಲಯದಲ್ಲಿ ಅಡುಗೆ ಮಾಡುತ್ತಿರುವ ಫೋಟೋಗಳು ಆಕ್ರೋಶ ಮೂಡಿಸಿದ ನಂತರ ತನಿಖೆಗೆ ಆದೇಶಿಸಿದ ಬೆನ್ನಿಗೇ ಸಚಿವೆಯ ಈ ಹೇಳಿಕೆ ಬಂದಿದೆ.

ಈ ಅಂಗನವಾಡಿ ಕೇಂದ್ರದಲ್ಲಿ 50ಕ್ಕೂ ಅಧಿಕ ಮಕ್ಕಳಿದ್ದಾರೆ. ವರದಿಗಾರರು ಅಲ್ಲಿಗೆ ತೆರಳಿದಾಗ ಟಾಯ್ಲೆಟ್ ಸೀಟಿನಲ್ಲಿ  ಅಡುಗೆಗೆ ಬೇಕಾದ ಸಾಮಗ್ರಿ ಇರಿಸಿ ಸ್ವಲ್ಪ ದೂರದಲ್ಲಿ ಅಡುಗೆ ಮಾಡಲಾಗುತ್ತಿದ್ದುದು ಕಂಡು ಬಂದಿತ್ತು.

ಸ್ವಸಹಾಯ ಗುಂಪೊಂದು ಶೌಚಾಲಯವನ್ನು ತಾತ್ಕಾಲಿಕ ಅಡುಗೆ ಕೋಣೆಯಾಗಿ  ಬಳಸುತ್ತಿದೆ. ಸಂಬಂಧಿತರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿ ಶಿವಪುರಿ ದೇವೇಂದ್ರ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News