ಕಾಂಗ್ರೆಸ್ ಸರಕಾರದ ಪರ ಮತ ಚಲಾಯಿಸಿದ ಇಬ್ಬರು ಬಿಜೆಪಿ ಶಾಸಕರು
ಭೋಪಾಲ್, ಜು. 24: ಮಧ್ಯಪ್ರದೇಶ ವಿಧಾನಸಭೆಯಲ್ಲಿ ಬುಧವಾರ ಮಸೂದೆಯೊಂದಕ್ಕೆ ಮತ ಹಾಕುವ ಸಂದರ್ಭ ಬಿಜೆಪಿಯ ಇಬ್ಬರು ಶಾಸಕರು ಕಾಂಗ್ರೆಸ್ ಸರಕಾರದ ಪರ ಮತ ಹಾಕಿದ್ದಾರೆ. ಇದರಿಂದ ಮಧ್ಯಪ್ರದೇಶದಲ್ಲಿ ಬಿಜೆಪಿ ಪ್ರಮುಖ ಹಿನ್ನಡೆ ಎದುರಿಸಬೇಕಾಗಿದೆ.
ಬಿಜೆಪಿಯ ಇಬ್ಬರು ಶಾಸಕರಾದ ನಾರಾಯಣ ತ್ರಿಪಾಠಿ ಹಾಗೂ ಶರದ್ ಕೋಲ್ ಮಧ್ಯಪ್ರದೇಶ ವಿಧಾನಸಭೆಯಲ್ಲಿ ಮಸೂದೆಯೊಂದಕ್ಕೆ ಕಾಂಗ್ರೆಸ್ ಸರಕಾರದ ಪರವಾಗಿ ಮತ ಹಾಕಿದರು. ತಮ್ಮ ವಿಧಾನಸಭಾ ಕ್ಷೇತ್ರವನ್ನು ಅಭಿವೃದ್ಧಿಪಡಿಸಲು ಬಯಸಿರುವುದರಿಂದ ಅಲ್ಪ ಬಹುಮತದ ಮೂಲಕ ಅಧಿಕಾರಕ್ಕೆ ಬಂದ ಕಮಲ್‌ನಾಥ್ ನೇತೃತ್ವದ ಸರಕಾರವನ್ನು ಬೆಂಬಲಿಸುವುದಾಗಿ ಮಾಜಿ ಕಾಂಗ್ರೆಸಿಗರಾದ ತ್ರಿಪಾಠಿ ಹಾಗೂ ಕೋಲ್ ಹೇಳಿದ್ದಾರೆ.
ಕ್ರಿಮಿನಲ್ ಕಾನೂನು (ಮಧ್ಯಪ್ರದೇಶ ತಿದ್ದುಪಡಿ) ಮಸೂದೆ 2019ಕ್ಕೆ ಒಟ್ಟು 122 ಶಾಸಕರು ಕಾಂಗ್ರೆಸ್ ಸರಕಾರದ ಪರವಾಗಿ ಮತ ಚಲಾಯಿಸಿದ್ದಾರೆ. 230 ಸದಸ್ಯರ ವಿಧಾನ ಸಭೆಯಲ್ಲಿ ಮತದಾನದಲ್ಲಿ ಭಾಗಿಯಾಗದ ಸ್ಪೀಕರ್ ಎನ್.ಪಿ. ತ್ರಿಪಾಠಿ ಸೇರಿದಂತೆ 121 ಶಾಸಕರ ಬೆಂಬಲವಿತ್ತು. ಕಾಂಗ್ರೆಸ್‌ನ 120 ಶಾಸಕರ ಬೆಂಬಲವಲ್ಲದೆ, ಅದರ ಮೈತ್ರಿ ಪಕ್ಷಗಳು ಹಾಗೂ ಇಬ್ಬರು ಬಿಜೆಪಿ ಶಾಸಕರ ಬೆಂಬಲ ಕೂಡ ಮಸೂದೆಗೆ ಇತ್ತು. ಮತದಾನದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ತ್ರಿಪಾಠಿ ಹಾಗೂ ಕೋಲ್, ನಮ್ಮ ವಿಧಾಸಭಾ ಕ್ಷೇತ್ರವನ್ನು ಅಭಿವೃದ್ಧಿಗೊಳಿಸಲು ಬಯಸುತ್ತಿರುವುದರಿಂದ ಕಮಲ್‌ನಾಥ್ ನೇತೃತ್ವದ ಸರಕಾರಕ್ಕೆ ಬೆಂಬಲ ನೀಡಿದ್ದೇವೆ ಎಂದು ಹೇಳಿದ್ದಾರೆ.
ಇದನ್ನು ‘ಘರ್ ವಾಪಸಿ’ ಎಂದು ಬಿಜೆಪಿ ಶಾಸಕರು ಕರೆದಿದ್ದಾರೆ.