ಸೂಕ್ತ ಪ್ರಕ್ರಿಯೆಯಿಲ್ಲದೆ ಒಬ್ಬನನ್ನು ‘ಉಗ್ರ’ ಎಂದು ಘೋಷಿಸುವುದು ನೈಸರ್ಗಿಕ ನ್ಯಾಯಕ್ಕೆ ವಿರುದ್ಧ: ಮಹುವಾ ಮೊಯಿತ್ರಾ

Update: 2019-07-24 17:16 GMT

ಹೊಸದಿಲ್ಲಿ, ಜು.24: ಭಯೋತ್ಪಾದನೆ ನಿಗ್ರಹ ಕಾನೂನಿಗೆ ಕೇಂದ್ರ ಸರಕಾರ ತಂದಿರುವ ತಿದ್ದುಪಡಿಗೆ ವಿಪಕ್ಷಗಳಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ಕೇಂದ್ರ ಸರಕಾರದ ಈ ಕ್ರಮ ದೇಶದ ಒಕ್ಕೂಟ ವ್ಯವಸ್ಥೆಗೆ ವಿರುದ್ಧವಾಗಿದೆ ಎಂದು ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ಟೀಕಿಸಿದ್ದಾರೆ.

 ಮಸೂದೆಯಲ್ಲಿ ಒಳಗೊಂಡಿರುವ ಅಂಶಗಳು ಜನವಿರೋಧಿ ಮತ್ತು ಸಂವಿಧಾನ ವಿರೋಧಿಯಾಗಿದೆ. ಇದು ಅಪಾಯಕಾರಿ ಕಾಯ್ದೆಯಾಗಿದೆ ಎಂದು ಮೊಯಿತ್ರಾ ಹೇಳಿದ್ದಾರೆ. ಅಕ್ರಮ ಚಟುವಟಿಕೆ (ತಡೆ)ಕಾಯ್ದೆಯು ಲೋಕಸಭೆಯಲ್ಲಿ 287-8 ಮತಗಳ ಅಂತರದಿಂದ ಅನುಮೋದನೆಗೊಂಡಿದೆ.

ಈ ತಿದ್ದುಪಡಿಯಿಂದಾಗಿ ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್‌ಐಎ) ಯಾವುದೇ ರಾಜ್ಯಕ್ಕೆ ತೆರಳಿ ಅಲ್ಲಿ ತನಿಖೆ ನಡೆಸಬಹುದು. ಇದಕ್ಕೆ ಆ ಯಾ ರಾಜ್ಯದ ಪೊಲೀಸರ ಅನುಮತಿ ಪಡೆಯುವ ಅಗತ್ಯವಿರುವುದಿಲ್ಲ. “ಈಗ ಸರಕಾರವನ್ನು ವಿರೋಧಿಸಿದರೆ ಆ ವ್ಯಕ್ತಿ ರಾಷ್ಟ್ರವಿರೋಧಿ ಎಂದು ಪರಿಗಣಿಸಲ್ಪಡುತ್ತಾನೆ. ರಾಷ್ಟ್ರೀಯ ಭದ್ರತೆಯ ವಿಷಯಕ್ಕೆ ಸಂಬಂಧಿಸಿ ವಿಪಕ್ಷಗಳು ವಿರೋಧ ವ್ಯಕ್ತಪಡಿಸಿದರೆ ನಮಗೆ ರಾಷ್ಟ್ರವಿರೋಧಿಗಳೆಂದು ಹಣೆಪಟ್ಟಿ ಕಟ್ಟುವ ಕಾರ್ಯತಂತ್ರವನ್ನು ಕೇಂದ್ರ ಸರಕಾರ ಹೊಂದಿದೆ. ಅಲ್ಲದೆ, ತಿದ್ದುಪಡಿಯಾದ ಕಾಯ್ದೆಯಲ್ಲಿ ಓರ್ವ ವ್ಯಕ್ತಿಯನ್ನು ಭಯೋತ್ಪಾದಕ ಎಂದು ಘೋಷಿಸುವ ಪ್ರಕ್ರಿಯೆ ಪ್ರಶ್ನಾರ್ಹವಾಗಿದೆ. ಸೂಕ್ತ ಪ್ರಕ್ರಿಯೆ ನಡೆಸದೆ ಈ ರೀತಿ ಮಾಡುವುದು ನೈಸರ್ಗಿಕ ನ್ಯಾಯಕ್ಕೆ ವಿರೋಧವಾಗಿದೆ” ಎಂದವರು ಹೇಳಿದ್ದಾರೆ.

ಇದೇ ಸಂದರ್ಭ ಹೇಳಿಕೆ ನೀಡಿರುವ ಎನ್‌ಸಿಪಿ ನಾಯಕಿ ಸುಪ್ರಿಯಾ ಸುಳೆ, ಈ ಹಿಂದೆ ನ್ಯಾಷನಲ್ ಕೌಂಟರ್ ಟೆರರಿಸಂ ಸೆಂಟರ್ ಮತ್ತು ನ್ಯಾಷನಲ್ ಇಂಟೆಲಿಜೆನ್ಸ್ ಗ್ರಿಡ್ ಕಾಯ್ದೆಗೆ ತಿದ್ದುಪಡಿ ತಂದಾಗ ಗುಜರಾತ್ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿ ತೀವ್ರವಾಗಿ ವಿರೋಧಿಸಿದ್ದರು ಎಂದು ಹೇಳಿದರು. ಅಮಾಯಕ ಜನರನ್ನು ಅನಗತ್ಯವಾಗಿ ದೌರ್ಜನ್ಯಕ್ಕೆ ಗುರಿಯಾಗಿಸಬಾರದು. ದೇಶದ ಒಕ್ಕೂಟ ವ್ಯವಸ್ಥೆಯನ್ನು ಉಳಿಸಿಕೊಳ್ಳಬೇಕು ಎಂದವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News