ಸಮ್ಲೇಟಿ ಬಾಂಬ್ ಸ್ಪೋಟ ಪ್ರಕರಣ: 20 ವರ್ಷಗಳನ್ನು ಜೈಲಿನಲ್ಲಿ ಕಳೆದ 6 ಮಂದಿ ನಿರ್ದೋಷಿಗಳು ಎಂದ ಕೋರ್ಟ್

Update: 2019-07-24 17:46 GMT
Photo: indianexpress.com

ಜೈಪುರ, ಜು. 24: ರಾಜಸ್ಥಾನದ ದೌಸಾ ಜಿಲ್ಲೆಯ ಸಮ್ಲೇಟಿ ಗ್ರಾಮದಲ್ಲಿ 23 ವರ್ಷಗಳ ಹಿಂದೆ ಸಂಭವಿಸಿದ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿ ಜೀವಾವಧಿ ಶಿಕ್ಷೆಗೆ ಗುರಿಯಾಗಿ 20 ವರ್ಷಗಳ ಜೈಲು ಶಿಕ್ಷೆ ಅನುಭವಿಸಿದ್ದ 6 ಮಂದಿಯನ್ನು ರಾಜಸ್ಥಾನ ಉಚ್ಚ ನ್ಯಾಯಾಲಯ ಸೋಮವಾರ ಖುಲಾಸೆಗೊಳಿಸಿದೆ.

ಸುಮಾರು 20 ವರ್ಷಗಳನ್ನು ಜೈಲಿನಲ್ಲಿ ಕಳೆದ ಕಾಶ್ಮೀರದ ಜಾವೇದ್ ಖಾನ್, ಲತೀಫ್ ಅಹ್ಮದ್ ಬಾಜಾ, ಮುಹಮ್ಮದ್ ಅಲಿ ಭಟ್ಟ್, ಮಿರ್ಜಾ ನಿಸಾರ್ ಮತ್ತು ಅಬ್ದುಲ್ ಗೋನಿ ಹಾಗು ಉತ್ತರ ಪ್ರದೇಶದ ರೈಸ್ ಬೇಗ್ ಎಂಬವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ.

ಜೈಪುರ-ಆಗ್ರಾ ಹೆದ್ದಾರಿಯಲ್ಲಿ 1996 ಮೇ 22ರಂದು ಬಸ್‌ ನಲ್ಲಿ ಸಂಭವಿಸಿದ ಸ್ಫೋಟದಲ್ಲಿ 14 ಮಂದಿ ಮೃತಪಟ್ಟಿದ್ದರು ಹಾಗೂ 37 ಮಂದಿ ಗಾಯಗೊಂಡಿದ್ದರು. ಬಸ್ ಆಗ್ರಾದಿಂದ ಬಿಕೇನರ್ ನತ್ತ ಸಂಚರಿಸುತ್ತಿತ್ತು. ಪ್ರಕರಣಕ್ಕೆ ಸಂಬಂಧಿಸಿ ಬಂದಿಕುಯಿ ವಿಚಾರಣಾ ನ್ಯಾಯಾಲಯ 2014 ಸೆಪ್ಟಂಬರ್‌ನಲ್ಲಿ 8 ಮಂದಿ ಆರೋಪಿಗಳನ್ನು ದೋಷಿಗಳು ಎಂದು ಪರಿಗಣಿಸಿತ್ತು.

ಪ್ರಮುಖ ಆರೋಪಿ ಅಬ್ದುಲ್ ಹಮೀದ್‌ ಗೆ ಮರಣದಂಡನೆ ವಿಧಿಸಿದ್ದ ನ್ಯಾಯಾಲಯ ಉಳಿದ 7 ಮಂದಿಗೆ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿತ್ತು. ರಾಜಸ್ಥಾನ ಉಚ್ಚ ನ್ಯಾಯಾಲಯದ ಜೈಪುರ ಪೀಠ ಸೋಮವಾರ ಪ್ರಧಾನ ಆರೋಪಿ ಹಮೀದ್‌ ನ ಮರಣದಂಡನೆ ಹಾಗೂ ಸ್ಫೋಟಕಗಳನ್ನು ಪೂರೈಸಿದ ಪಪ್ಪು ಅಲಿಯಾಸ್ ಸಲೀಮ್ ನ ಜೀವಾವಧಿ ಶಿಕ್ಷೆಯನ್ನು ಎತ್ತಿ ಹಿಡಿದಿದೆ.

ಹಮೀದ್ ಹಾಗೂ ಆರು ಮಂದಿ ಆರೋಪಿಗಳ ನಡುವಿನ ನಂಟನ್ನು ಸಾಬೀತುಪಡಿಸುವಲ್ಲಿ ಪ್ರಾಸಿಕ್ಯೂಷನ್ ವಿಫಲವಾಗಿದೆ ಎಂದು ಹೇಳಿರುವ ನ್ಯಾಯಮೂರ್ತಿ ಸಬೀನಾ ಹಾಗೂ ಗೋವರ್ಧನ್ ಬರ್ಧಾರ್ ಅವರನ್ನು ಒಳಗೊಂಡ ಪೀಠ 6 ಮಂದಿಯನ್ನು ಖುಲಾಸೆಗೊಳಿಸಿದೆ. ಪ್ರಕರಣದ ಇನ್ನೋರ್ವ ಆರೋಪಿಯಾಗಿದ್ದ ಫಾರೂಕ್ ಅಹ್ಮದ್ ಖಾನ್‌ ರ ಖುಲಾಸೆ ತೀರ್ಪನ್ನು ನ್ಯಾಯಾಲಯ ಎತ್ತಿ ಹಿಡಿದಿದೆ. ಇವರನ್ನು ಖುಲಾಸೆಗೊಳಿಸಿ ಕೆಳ ನ್ಯಾಯಾಲಯ 2014ರಲ್ಲಿ ನೀಡಿದ ತೀರ್ಪು ಪ್ರಶ್ನಿಸಿ ರಾಜ್ಯ ಸರಕಾರ ಮೇಲ್ಮನವಿ ಸಲ್ಲಿಸಿತ್ತು. ಆದರೆ, ಈ ಮನವಿಯನ್ನು ಉಚ್ಚ ನ್ಯಾಯಾಲಯ ತಿರಸ್ಕರಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News