ಬಂಗಾಳಕ್ಕೆ ಭರ್ಜರಿ ಜಯ
Update: 2019-07-24 23:33 IST
ಹೈದರಾಬಾದ್, ಜು.24: ಇಸ್ಮಾಯೀಲ್ ಹಾಗೂ ಬಲ್‌ದೇವ್ ಸಿಂಗ್ ಅವರ ಅತ್ಯುತ್ತಮ ಪ್ರದರ್ಶನದ ನೆರವಿನಿಂದ ಬಂಗಾಳ ವಾರಿಯರ್ಸ್ ತಂಡ ಯುಪಿ ಯೋಧಾ ವಿರುದ್ಧ ಬುಧವಾರ ನಡೆದ ಪ್ರೊ ಕಬಡ್ಡಿ ಲೀಗ್‌ನ ಏಳನೇ ಪಂದ್ಯದಲ್ಲಿ 48-17 ಅಂಕಗಳ ಅಂತರದಿಂದ ಭರ್ಜರಿ ಜಯ ದಾಖಲಿಸಿದೆ.
ಬಂಗಾಳ ತಂಡ ಕಬಡ್ಡಿ ಲೀಗ್ ಇತಿಹಾಸದಲ್ಲಿ ಮೊದಲ ಬಾರಿ ಭಾರೀ ಅಂತರದಿಂದ ಜಯ ಗಳಿಸಿದ ಸಾಧನೆ ಮಾಡಿತು. ಈ ಮೂಲಕ ಲೀಗ್‌ನಲ್ಲಿ ಶುಭಾರಂಭ ಮಾಡಿತು. ಬಂಗಾಳ ಹಾಗೂ ಯುಪಿ ಈ ಹಿಂದೆ ಮೂರು ಬಾರಿ ಮುಖಾಮುಖಿಯಾಗಿದ್ದವು. ಈ ಪೈಕಿ ಬಂಗಾಳ 2 ಬಾರಿ ಜಯ ಸಾಧಿಸಿತ್ತು.
ಟಾಪ್ ರೈಡರ್ ಆಗಿ ಹೊರಹೊಮ್ಮಿದ ಇಸ್ಮಾಯೀಲ್ ಒಟ್ಟು 10 ಅಂಕ ಗಳಿಸಿದರು. ಟಾಪ್ ಡಿಫೆಂಡರ್ ಎನಿಸಿಕೊಂಡ ಬಲ್‌ದೇವ್ ಸಿಂಗ್ 7 ಅಂಕ ಕಲೆ ಹಾಕಿದರು. ಪ್ರಪಂಜನ್ 5 ಅಂಕ ಗಳಿಸಿ ತಂಡದ ಏಕಪಕ್ಷೀಯ ಗೆಲುವಿಗೆ ನೆರವಾದರು.
ಯುಪಿ ಯೋಧಾ ಪರ ಮೋನು ಗೊಯಟ್(6) ಹಾಗೂ ಸುರೇಂದರ್ ಸಿಂಗ್(3) ಒಟ್ಟು 9 ಅಂಕ ಗಳಿಸಿದರು.