ಟೆಸ್ಟ್‌ನಲ್ಲಿ ಧೋನಿಯ ನಂ.7 ಜೆರ್ಸಿಗೂ ನಿವೃತ್ತಿ

Update: 2019-07-24 18:23 GMT

ಹೊಸದಿಲ್ಲಿ, ಜು.24: ಮುಂಬರುವ ವರ್ಲ್ಡ್ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ಆಟಗಾರರು ಧರಿಸುವ ಬಿಳಿ ಜೆರ್ಸಿಯಲ್ಲಿ ಅವರು ಉಪಯೋಗಿಸುವ ಸಂಖ್ಯೆ ಇರಲಿದೆ. ಆದರೆ ಧೋನಿ ಟೆಸ್ಟ್‌ನಲ್ಲಿ ನಿವೃತ್ತರಾಗಿರುವ ಹಿನ್ನೆಲೆಯಲ್ಲಿ ಅವರ ನಂ.7 ನಂಬರ್‌ನ್ನು ಭಾರತದ ಯಾರಿಗೂ ನೀಡದಿರುವ ಬಗ್ಗೆ ಬಿಸಿಸಿಐ ನಿರ್ಧಾರ ಕೈಗೊಂಡಿದೆ.

ಆಗಸ್ಟ್ 22ರಂದು ಆ್ಯಂಟಿಗುವಾದಲ್ಲಿ ಭಾರತ -ವೆಸ್ಟ್‌ಇಂಡೀಸ್ ತಂಡಗಳ ನಡುವಿನ ಟೆಸ್ಟ್ ಪಂದ್ಯದಲ್ಲಿ ಉಭಯ ತಂಡಗಳ ಆಟಗಾರರು ನಂಬರ್ ಹಾಗೂ ಹೆಸರು ಇರುವ ಬಿಳಿ ಜೆರ್ಸಿ ಧರಿಸಿ ಮೊದಲ ಬಾರಿ ಕಣಕ್ಕಿಳಿಯಲಿದ್ದಾರೆ.

  ಸಚಿನ್ ತೆಂಡುಲ್ಕರ್ ನಂ.10 ಜೆರ್ಸಿ ಧರಿಸಿ ಆಡುತ್ತಿದ್ದರು. ಅವರು ನಿವೃತ್ತರಾದ ಬೆನ್ನಲ್ಲೆ ಅವರ ಜೆರ್ಸಿಗೂ ನಿವೃತ್ತಿ ನೀಡಲಾಗಿತ್ತು. ಶಾರ್ದುಲ್ ಠಾಕೂರ್ ತನ್ನ ಚೊಚ್ಚಲ ಪಂದ್ಯದಲ್ಲಿ ನಂ.10 ಜೆರ್ಸಿ ಧರಿಸಿ ಕ್ರೀಡಾಂಗಣಕ್ಕೆ ಇಳಿದಾಗ ಈ ವಿಚಾರದಲ್ಲಿ ಅಭಿಮಾನಿಗಳಿಂದ ವಿರೋಧ ವ್ಯಕ್ತವಾಗಿತ್ತು. ಶಾರ್ದುಲ್‌ಗೆ ನಂ.10 ಜೆರ್ಸಿ ಧರಿಸದಂತೆ ಸಚಿನ್ ಅಭಿಮಾನಿಗಳು ವಿನಂತಿ ಮಾಡಿದ್ದರು.

       ವಿವಾದದ ಹಿನ್ನೆಲೆಯಲ್ಲಿ ಬಿಸಿಸಿಐ ಶಾರ್ದುಲ್‌ಗೆ ನೀಡಲಾಗಿದ್ದ ಜೆರ್ಸಿ ನಂ.10ನ್ನು ಹಿಂಪಡೆದಿತ್ತು. ಸಚಿನ್ ಗೌರವಾರ್ಥವಾಗಿ ಅವರು ಧರಿಸುತ್ತಿದ್ದ ನಂ.10 ಜೆರ್ಸಿಗೆ ಬಿಸಿಸಿಐ ನಿವೃತ್ತಿ ಘೋಷಿಸಿತ್ತು. ಧೋನಿ ನಂ.7 ಜೆರ್ಸಿಯನ್ನು ಧರಿಸಿ ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ ಆಡುವುದನ್ನು ಮುಂದುವರಿಸಿದ್ದರು. 2011ರಲ್ಲಿ ವಿಶ್ವಕಪ್ ಜಯಸಿದ ಭಾರತ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಅವರು ಧರಿಸುತ್ತಿದ್ದ ಜೆರ್ಸಿ ನಂ.7 ಇನ್ನು ಮುಂದೆ ಯಾರಿಗೂ ಸಿಗಲಾರದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News