‘ನೀನು ನೆಕ್ಲೇಸ್ ಏಕೆ ಧರಿಸಿದ್ದಿ?’: ಲೈಂಗಿಕ ಕಿರುಕುಳ ದೂರು ನೀಡಿದ ಬಾಲಕಿಯನ್ನು ನಿಂದಿಸಿದ ಉ.ಪ್ರದೇಶ ಪೊಲೀಸ್

Update: 2019-07-25 13:06 GMT

ಕಾನ್ಪುರ್, ಜು.25: ಲೈಂಗಿಕ ಕಿರುಕುಳದ ವಿರುದ್ಧ ದೂರು ನೀಡಲು ಪೊಲೀಸ್ ಠಾಣೆಗೆ ತೆರಳಿದ 16 ವರ್ಷದ ಬಾಲಕಿಯ ದೂರು ದಾಖಲಿಸುವ ಬದಲು ಪೊಲೀಸ್ ಹೆಡ್ ಕಾನ್‍ಸ್ಟೇಬಲ್ ಒಬ್ಬರು ಆಕೆಯನ್ನೇ ನಿಂದಿಸಿದ ಘಟನೆಯ ವೀಡಿಯೋವನ್ನು ಕಾಂಗ್ರೆಸ್ ನಾಯಕಿ ಪ್ರಿಯಾಂಕ ಗಾಂಧಿ ಟ್ವೀಟ್ ಮಾಡಿದ್ದಾರೆ. ಉತ್ತರ ಪ್ರದೇಶದ ಕಾನ್ಪುರ್ ನಲ್ಲಿ ಈ ಘಟನೆ ನಡೆದಿದೆ. ವಿಡಿಯೋ ವೈರಲ್ ಆದ ನಂತರ ಹೆಡ್ ಕಾನ್‍ಸ್ಟೇಬಲ್ ನನ್ನು ಸೇವೆಯಿಂದ ವಜಾಗೊಳಿಸಲಾಗಿದೆ.

ಈ ಘಟನೆಯ ವೀಡಿಯೋವನ್ನು ಬಾಲಕಿಯ ಜತೆ ಠಾಣೆಗೆ ತೆರಳಿದ್ದ ಆಕೆಯ ಸೋದರ ಚಿತ್ರೀಕರಿಸಿದ್ದ. ಬಾಲಕಿಯ ಹೆತ್ತವರು ಕೂಡ ಈ ಸಂದರ್ಭ ಹಾಜರಿದ್ದರು. ಬಾಲಕಿಯ ದೂರಿನ ಆಧಾರದಲ್ಲಿ ಎಫ್‍ಐಆರ್ ದಾಖಲಿಸಲು ನಿರಾಕರಿಸಿದ ಹೆಡ್ ಕಾನ್‍ ಸ್ಟೇಬಲ್  ತಾರ್ ಬಾಬು ನಂತರ ಆಕೆಯ ಜತೆ ಆಕ್ಷೇಪಾರ್ಹ ಮಾತುಗಳನ್ನೂ ಆಡಿದ್ದಾರೆ.

“ಏಕೆ ಉಂಗುರ ಧರಿಸಿದ್ದಿ ? ಕೊರಳಲ್ಲಿ ನೆಕ್ಲೇಸ್ ಏಕೆ? ಇಷ್ಟೆಲ್ಲಾ ಏಕೆ ಧರಿಸಿದ್ದಿ ? ಇವುಗಳ ಪ್ರಯೋಜನವೇನು ? ನೀನು ಕಲಿಯುತ್ತಿಲ್ಲ, ನೀನು ಏನಾಗಿದ್ದಿ ಎಂದು ಇದು ತೋರಿಸುತ್ತದೆ'' ಈ ಕಾನ್‍ಸ್ಟೇಬಲ್ ಹೇಳುತ್ತಿರುವುದು ವೀಡಿಯೋದಲ್ಲಿ ದಾಖಲಾಗಿದೆ.

ಈ ಸಂದರ್ಭ ಬಾಲಕಿಯ ಹೆತ್ತವರು ಮಧ್ಯ ಪ್ರವೇಶಿಸಲು ಯತ್ನಿಸಿದಾಗ ಅವರನ್ನೂ ಗದರಿಸಿದ ಕಾನ್‍ಸ್ಟೇಬಲ್, “ಹುಡುಗಿ ಏನು ಮಾಡುತ್ತಾಳೆಂದು ನಿಮಗೆ ಕಾಣುವುದಿಲ್ಲವೇ?, ನೀವು ಕೆಲಸಕ್ಕೆ ಹೋಗುತ್ತೀರಿ ಎನ್ನುತ್ತೀರಿ. ಮನೆಗೆ ಹಿಂದಿರುಗುವುದಿಲ್ಲವೇ?'' ಎಂದು ಆತ ಪ್ರಶ್ನಿಸಿದ್ದಾನೆ.

ಈ ಸಂಭಾಷಣೆಯ ವೀಡಿಯೋ ವೈರಲ್ ಆದ ನಂತರವಷ್ಟೇ ಪೊಲೀಸರು ಎಫ್‍ಐಆರ್ ದಾಖಲಿಸಿದ್ದರು.

“ಲೈಂಗಿಕ ಕಿರುಕುಳ ದೂರನ್ನು ದಾಖಲಿಸಲು ಬಂದವರ ಜತೆ ಅವರು ಹೀಗೆ ವರ್ತಿಸುತ್ತಿದ್ದಾರೆ. ಉತ್ತರ ಪ್ರದೇಶದಲ್ಲಿ ಮಹಿಳೆಯರ ವಿರುದ್ಧದ ಅಪರಾಧ ಪ್ರಕರಣದಲ್ಲಿ ಇಳಿಕೆಯಾಗಿಲ್ಲ, ಜತೆಗೆ ಕಾನೂನು ಸುವ್ಯವಸ್ಥೆ ಕಾಪಾಡಬೇಕಾದವರ ಈ ರೀತಿಯ ವರ್ತನೆ'' ಎಂದು ವೀಡಿಯೋ ಜತೆ ಪ್ರಿಯಾಂಕ ಟ್ವೀಟ್ ಮಾಡಿದ್ದರು.

ಘಟನೆಯ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News