‘ಉರಿ’ ಚಿತ್ರದ ಉಚಿತ ಪ್ರದರ್ಶನ: ಮಹಾರಾಷ್ಟ್ರ ಸರಕಾರದ ಆದೇಶಕ್ಕೆ ಥಿಯೇಟರ್‌ಗಳ ಆಕ್ಷೇಪ

Update: 2019-07-25 14:37 GMT

 ಮುಂಬೈ,ಜು.25: ಜು.26ರಂದು ಕಾರ್ಗಿಲ್ ದಿವಸ್ ಆಚರಣೆಯ ಅಂಗವಾಗಿ ‘ಉರಿ:ದಿ ಸರ್ಜಿಕಲ್ ಸ್ಟ್ರೈಕ್’ ಚಿತ್ರವನ್ನು ಉಚಿತವಾಗಿ ಪ್ರದರ್ಶಿಸುವಂತೆ ಮಹಾರಾಷ್ಟ್ರ ಸರಕಾರದ ಆದೇಶಕ್ಕೆ ಮುಂಬೈನ ಥಿಯೇಟರ್‌ಗಳ ಮಾಲಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ರಾಷ್ಟ್ರವಾದವನ್ನು ಹರಡಲು ರಾಜ್ಯಾದ್ಯಂತ 500ಕ್ಕೂ ಅಧಿಕ ಚಲನಚಿತ್ರ ಮಂದಿರಗಳಲ್ಲಿ ’ಉರಿ’ ಚಿತ್ರದ ವಿಶೇಷ ಪ್ರದರ್ಶನಗಳನ್ನು ಮಹಾರಾಷ್ಟ್ರ ಸರಕಾರವು ಯೋಜಿಸಿದೆ ಎಂದು ಸುದ್ದಿಸಂಸ್ಥೆಯು ವರದಿ ಮಾಡಿದೆ.

ತಮಗೆ ಸರಕಾರದ ಆದೇಶ ಬಂದಿರುವುದನ್ನು ಮುಂಬೈ ಮತ್ತು ಪುಣೆಗಳಲ್ಲಿಯ ಥಿಯೇಟರ್ ‌ಗಳ ಮಾಲಿಕರು ಖಚಿತ ಪಡಿಸಿದ್ದಾರೆ. ತಮ್ಮ ಗುರುತು ಚೀಟಿಗಳೊಂದಿಗೆ ಬರುವ ಕಾಲೇಜು ವಿದ್ಯಾರ್ಥಿಗಳು ಮತ್ತು ಮಾಜಿ ರಕ್ಷಣಾ ಸಿಬ್ಬಂದಿಗಾಗಿ ಜು.26ರಂದು ಬೆಳಿಗ್ಗೆ ಹತ್ತು ಗಂಟೆಗೆ ‘ಉರಿ’ ಚಿತ್ರ ಪ್ರದರ್ಶನವನ್ನು ಏರ್ಪಡಿಸುವಂತೆ ನಿರ್ದೇಶ ನೀಡಲಾಗಿದೆ ಎಂದು ಜಿ7 ಮಲ್ಟಿಪ್ಲೆಕ್ಸ್ ಮತ್ತು ಮರಾಠಾ ಮಂದಿರದ ಕಾರ್ಯಕಾರಿ ನಿರ್ದೇಶಕ ಮನೋಜ ದೇಸಾಯಿ ತಿಳಿಸಿದರು.

ಚಿತ್ರದ ಪ್ರದರ್ಶನವು ರಕ್ಷಣಾ ಪಡೆಗಳಿಗೆ ಸೇರುವಂತೆ ಯುವಜನರನ್ನು ಪ್ರೇರೇಪಿಸಲು ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರ ಉಪಕ್ರಮವಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ ಎಂದ ಅವರು, “ನಾವೂ ದೇಶಭಕ್ತರಾಗಿದ್ದೇವೆ”. ಆದರೆ ಅಧಿಕಾರಿಗಳು ‘ದೇಶಭಕ್ತಿ’ಯನ್ನು ಜಾರಿಗೊಳಿಸಲು ಇದು ಸೂಕ್ತ ಮಾರ್ಗವೇ ಎಂದು ಪ್ರಶ್ನಿಸಿದರು.

“ನಮ್ಮ ಯೋಧರ ಬಲಿದಾನವನ್ನು ಸ್ಮರಿಸುವುದು ಮತ್ತು ವಿಜಯದ ಆಚರಣೆ ನಮ್ಮ ರಾಷ್ಟ್ರೀಯ ಕರ್ತವ್ಯವಾಗಿದೆ’ ಎಂದು ಹೇಳಿದ ಮುಂಬೈ ಉಪನಗರ ಜಿಲ್ಲಾಧಿಕಾರಿ ಮಿಲಿಂದ ಬೋರಿಕರ್ ಅವರು,ಇನ್ನು ಚಿತ್ರ ಪ್ರದರ್ಶನದ ಮೇಲೆ ವಿಧಿಸಲಾಗುವ ಜಿಎಸ್‌ಟಿ ಮರಳಿಕೆಗೆ ಸಂಬಂಧಿಸಿದಂತೆ ನಾವು ಸರಕಾರದೊಂದಿಗೆ ಚರ್ಚಿಸುತ್ತೇವೆ ಎಂದು ತಿಳಿಸಿದರು.

ಜು.26ರಂದು ಬೆಳಿಗ್ಗೆ ‘ಉರಿ’ ಪ್ರದರ್ಶನಕ್ಕಾಗಿ ಮಲ್ಟಿಪ್ಲೆಕ್ಸ್‌ಗಳ ಎಲ್ಲ ಪರದೆಗಳನ್ನೂ ಮೀಸಲಿಡಬೇಕು ಎನ್ನುವುದನ್ನು ನಿರಾಕರಿಸಿದ ಮಲ್ಟಿಪ್ಲೆಕ್ಸ್ ಅಸೋಸಿಯೇಷನ್ ಆಫ್ ಇಂಡಿಯಾದ ಪ್ರಧಾನ ಕಾರ್ಯದರ್ಶಿ ಪ್ರಕಾಶ ಚಾಪಾಳ್ಕರ್ ಅವರು,ಕೇವಲ ಒಂದು ತೆರೆಯನ್ನು ಮೀಸಲಿಡುವಂತೆ ಸೂಚಿಸಲಾಗಿದೆ. ಸರಕಾರವು ಇದೇ ಮೊದಲ ಬಾರಿಗೆ ಇಂತಹ ಕೋರಿಕೆಯನ್ನು ಮಾಡಿಕೊಂಡಿರುವುದರಿಂದ ಆಕ್ಷೇಪಿಸದಿರಲು ನಾವು ನಿರ್ಧರಿಸಿದ್ದೇವೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News