ಉನಾ ದಲಿತರ ಮೇಲಿನ ದೌರ್ಜನ್ಯ ಪ್ರಕರಣ: ಕರ್ತವ್ಯದಿಂದ ಮುಕ್ತಗೊಳಿಸುವಂತೆ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಪತ್ರ

Update: 2019-07-25 17:52 GMT

ಅಹ್ಮದಾಬಾದ್, ಜು. 24: ಉನಾ ದಲಿತ ದೌರ್ಜನ್ಯ ಪ್ರಕರಣದಿಂದ ತನ್ನನ್ನು ಮುಕ್ತಗೊಳಿಸುವಂತೆ ಕೋರಿ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ದೀಪೇಂದ್ರ ಯಾದವ್ ಕಾನೂನು ವಿಭಾಗಕ್ಕೆ ಪತ್ರ ಬರೆದಿದ್ದಾರೆ.

ಗುಜರಾತ್‌ನ ಗಿರಿ ಸೋಮನಾಥ್ ಜಿಲ್ಲೆಯ ಉನಾದಲ್ಲಿ 2016 ಜುಲೈಯಲ್ಲಿ ಗೋರಕ್ಷಕರ ತಂಡವೊಂದು ಗೋವಿನ ಚರ್ಮ ಸುಲಿದಿರುವುದಾಗಿ ಆರೋಪಿಸಿ ದಲಿತ ಕುಟುಂಬವೊಂದರ 6 ಮಂದಿ ಸದಸ್ಯರು ಹಾಗೂ ಅವರ ನೆರೆಹೊರೆಯವರ ಮೇಲೆ ಹಲ್ಲೆ ನಡೆಸಿತ್ತು. ದಲಿತ ಯುವಕರನ್ನು ಅರೆನಗ್ನವಾಗಿ ಮೆರವಣಿಗೆ ನಡೆಸಿತ್ತು. ಅವರಿಗೆ ಥಳಿಸಿ, ವಾಹನಕ್ಕೆ ಕಟ್ಟಿ ಪೊಲೀಸ್ ಠಾಣೆ ವರೆಗೆ ಎಳೆದೊಯ್ದಿತ್ತು. ಪೊಲೀಸರು ಆಗಮಿಸಿದಾಗ ಅವರು ಪರಾರಿಯಾಗಿದ್ದರು.

ದಲಿತ ಯುವಕರಿಗೆ ಗೋರಕ್ಷಕರು ದೊಣ್ಣೆ, ಪೈಪ್ ಹಾಗೂ ಚೂರಿಯಿಂದ ಹಲ್ಲೆ ನಡೆಸುತ್ತಿರುವ ವೀಡಿಯೊ ವೈರಲ್ ಆಗಿತ್ತು. ಇದರಿಂದಾಗಿ ರಾಜ್ಯಾದ್ಯಂತ ಪ್ರತಿಭಟನೆ ನಡೆದಿತ್ತು. ನಾಲ್ವರು ಪೊಲೀಸರ ಸಹಿತ 43 ಮಂದಿಯನ್ನು ಬಂಧಿಸಲಾಗಿತ್ತು. ಆದರೆ, ಅದೇ ದಿನ ಎಲ್ಲ ನಾಲ್ವರು ಪೊಲೀಸರಿಗೆ ಜಾಮೀನು ದೊರೆತಿತ್ತು. ಓರ್ವ ಪ್ರಮುಖ ಸಂಚುಗಾರನಿಗೆ ಘಟನೆ ನಡೆದ 6 ತಿಂಗಳ ಒಳಗೆ ಜಾಮೀನು ದೊರೆತಿತ್ತು. ಆರೋಪಿಯಾಗಿದ್ದ ಓರ್ವ ಪೊಲೀಸ್ 2017ರಲ್ಲಿ ಮೃತಪಟ್ಟಿದ್ದ. 21 ಮಂದಿ ಆರೋಪಿಗಳಿಗೆ ಒಂದು ತಿಂಗಳಲ್ಲಿ ಜಾಮೀನು ದೊರೆತಿತ್ತು. ಘಟನೆ ನಡೆದ ಎರಡು ವರ್ಷಗಳ ಬಳಿಕ ವಿಚಾರಣೆ ಆರಂಭವಾಗಿತ್ತು.

ಈ ಪ್ರಕರಣದಲ್ಲಿ ದೀಪೇಂದ್ರ ಯಾದವ್ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಆಗಿ ನಿಯೋಜನೆಯಾಗಿದ್ದರು. ಅವರು ಸಂಬಂಧಿತ ಪ್ರಾಧಿಕಾರಕ್ಕೆ ಪತ್ರ ಬರೆದು ಕಚೇರಿ, ಭದ್ರತೆ ಹಾಗೂ ಪ್ರಯಾಣ ಸೌಲಭ್ಯ ಒದಗಿಸುವಂತೆ ಕೋರಿದ್ದರು. ಆದರೆ, ಅವರ ಬೇಡಿಕೆ ಈಡೇರಿರಲಿಲ್ಲ. ಭದ್ರತೆ ಕೊರತೆ ಹಿನ್ನೆಲೆಯಲ್ಲಿ ನಿಯೋಜನೆಯಾಗಿದ್ದ ಮೂರು ತಿಂಗಳ ಒಳಗೆ ಕರ್ತವ್ಯದಿಂದ ಮುಕ್ತರಾಗುವುದಾಗಿ ಅವರು ಎಚ್ಚರಿಕೆ ನೀಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News