ವಿರೋಧದ ಮಧ್ಯೆಯೇ ಆರ್‌ಟಿಐ ತಿದ್ದುಪಡಿ ಮಸೂದೆ ರಾಜ್ಯಸಭೆಯಲ್ಲಿ ಅಂಗೀಕಾರ

Update: 2019-07-25 17:54 GMT

ಹೊಸದಿಲ್ಲಿ, ಜು.25: ಮಾಹಿತಿ ಹಕ್ಕು ಕಾಯ್ದೆಗೆ ತಿದ್ದುಪಡಿ ತರುವ ಉದ್ದೇಶಿದಿಂದ ಪರಿಚಯಿಸಲಾಗಿರುವ ಆರ್‌ಟಿಐ ತಿದ್ದುಪಡಿ ಮಸೂದೆಯನ್ನು ರಾಜ್ಯಸಭೆಯಲ್ಲಿ ವಿರೋಧ ಪಕ್ಷದ ವಿರೋಧದ ಮಧ್ಯೆಯೂ ಅಂಗೀಕರಿಸಲಾಯಿತು. ಪ್ರಧಾನಿ ಮೋದಿ ಕೊನೆಯ ಕ್ಷಣದಲ್ಲಿ ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರ ಮನವೊಲಿಸುವಲ್ಲಿ ಸಫಲವಾಗುವ ಮೂಲಕ ಬಿಜು ಜನತಾದಳದ ಬೆಂಬಲಪಡೆಯಲು ಸಾಧ್ಯವಾದ ಕಾರಣ ಈ ಕಾಯ್ದೆ ಯಾವುದೇ ತಡೆಯಿಲ್ಲದೆ ರಾಜ್ಯಸಭೆಯಲ್ಲಿ ಅಂಗೀಕಾರ ಪಡೆದುಕೊಂಡಿದೆ. ತಿದ್ದುಪಡಿ ಮಸೂದೆಯನ್ನು ಉನ್ನತ ಮಟ್ಟದ ಪರಿಶೀಲನೆಗೆ ಆಯ್ಕೆ ಸಮಿತಿಗೆ ಕಳುಹಿಸಬೇಕು ಎಂದು ವಿರೋಧ ಪಕ್ಷದ ಮಂಡನೆಯ ವಿರುದ್ಧ 117 ಮತಗಳು ಬೀಳುವ ಮೂಲಕ ಪಾರದರ್ಶಕ ಕಾಯ್ದೆಗೆ ತಿದ್ದುಪಡಿ ತರುವ ಕಾಯ್ದೆಯು ಸುಸೂತ್ರವಾಗಿ ಅಂಗೀಕಾರಗೊಂಡಿತು. ಮಸೂದೆಗೆ ವಿರೋಧವಾಗಿ 75 ಮತಗಳು ಚಲಾವಣೆಯಾಗಿವೆ. ಎನ್‌ಡಿಎ ಕೂಟದ ಹೊರಗಿರುವ ಪಕ್ಷಗಳಾದ ಬಿಜೆಡಿ, ತೆಲಂಗಾಣ ರಾಷ್ಟ್ರ ಸಮಿತಿ ಮತ್ತು ವೈಎಸ್‌ಆರ್ ಕಾಂಗ್ರೆಸ್ ಆರ್‌ಟಿಐ ತಿದ್ದುಪಡಿ ಮಸೂದೆ ಪರ ಮತ ಚಲಾಯಿಸಲು ಒಪ್ಪಿದ ಕಾರಣ ಸರಕಾರ ವಿರೋಧ ಪಕ್ಷವೇ ಹಿಡಿತ ಹೊಂದಿರುವ ರಾಜ್ಯಸಭೆಯಲ್ಲಿ ಮಸೂದೆಯನ್ನು ಅಂಗೀಕರಿಸಲು ಸಾಧ್ಯವಾಗಿದೆ. ಆರ್‌ಟಿಐ ಕಾಯ್ದೆ ತಿದ್ದುಪಡಿಯಿಂದ ಸರಕಾರಕ್ಕೆ, ಕೇಂದ್ರ ಮತ್ತು ರಾಜ್ಯಗಳ ಮಾಹಿತಿ ಆಯುಕ್ತರ ಸೇವಾವಧಿ, ವೇತನ, ಭತ್ಯೆ ಮತ್ತು ಇತರ ವಿಷಯಗಳನ್ನು ನಿರ್ಧರಿಸುವ ಅವಕಾಶ ನೀಡುತ್ತದೆ.

ಆರ್‌ಟಿಐ ಕಾಯ್ದೆ ಸೇರಿದಂತೆ ಬಾಕಿಯಿರುವ 16 ಮಸೂದೆಗಳನ್ನು ಆಯ್ಕೆ ಸಮಿತಿ ಪರಿಶೀಲನೆಗೆ ಕಳುಹಿಸಬೇಕು ಎಂದು ರಾಜ್ಯಸಭೆಯಲ್ಲಿ ಆಗ್ರಹಿಸಲು ಕಾಂಗ್ರೆಸ್ ಮತ್ತು ಇತರ ವಿರೋಧ ಪಕ್ಷಗಳ ಸಭೆಯಲ್ಲಿ ನಿರ್ಧರಿಸಲಾಗಿತ್ತು. ಆದರೆ ಆಶ್ಚರ್ಯಕರ ಬೆಳವಣಿಗೆಯಲ್ಲಿ ಮೈತ್ರಿಕೂಟಗಳ ಹೊರಗಿರುವ ಪಕ್ಷಗಳು ಮಸೂದೆಯ ಪರ ಮತ ಚಲಾಯಿಸಿ ವಿರೋಧ ಪಕ್ಷಗಳಿ ನಿರೀಕ್ಷೆಯನ್ನು ಹುಸಿಯಾಗಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News