ಜಪಾನ್ ಓಪನ್: ಸೋಲಿನ ಭೀತಿಯಿಂದ ಪಾರಾದ ಸಿಂಧು ಕ್ವಾರ್ಟರ್ ಫೈನಲ್ ಗೆ

Update: 2019-07-25 18:24 GMT

ಟೋಕಿಯೊ, ಜು.25: ಜಪಾನ್ ಓಪನ್‌ನ ಎರಡನೇ ಸುತ್ತಿನ ಪಂದ್ಯದಲ್ಲಿ ಸೋಲಿನ ಭೀತಿಯಿಂದ ಪಾರಾದ ಭಾರತೀಯ ಶಟ್ಲರ್ ಪಿ.ವಿ. ಸಿಂಧು ಕ್ವಾರ್ಟರ್ ಫೈನಲ್‌ತಲುಪಿದ್ದಾರೆ.

  ಇಲ್ಲಿ ಗುರುವಾರ 61 ನಿಮಿಷಗಳ ಕಾಲ ನಡೆದ ಮಹಿಳೆಯರ ಸಿಂಗಲ್ಸ್‌ನ ಎರಡನೇ ಸುತ್ತಿನ ಪಂದ್ಯದಲ್ಲಿ ವಿಶ್ವದ ನಂ.5ನೇ ಆಟಗಾರ್ತಿ ಸಿಂಧು ತನಗಿಂತ 15 ಸ್ಥಾನ ಕೆಳಗಿರುವ ಜಪಾನ್‌ನ ಅಯಾ ಒಹೊರಿ ಅವರನ್ನು 11-21, 21-10, 21-13 ಗೇಮ್‌ಗಳ ಅಂತರದಿಂದ ಸೋಲಿಸಿದರು.

20ನೇ ರ್ಯಾಂಕಿನ ಒಹೊರಿ ಮೊದಲ ಗೇಮ್‌ನ್ನು 21-11 ಅಂತರದಿಂದ ಸುಲಭವಾಗಿ ಗೆದ್ದುಕೊಂಡರು. ಎರಡನೇ ಗೇಮ್‌ನ್ನು 21-10 ಅಂತರದಿಂದ ಗೆದ್ದುಕೊಂಡು ತಿರುಗೇಟು ನೀಡಿದ ಸಿಂಧು ಪಂದ್ಯವನ್ನು ಮೂರನೇ ಗೇಮ್‌ಗೆ ಕೊಂಡೊಯ್ದರು. ಮೂರನೇ ಗೇಮ್ ತೀವ್ರ ಪೈಪೋಟಿಯಿಂದ ಸಾಗಿದ್ದು, ಅಂತಿಮವಾಗಿ ಸಿಂಧು 21-13 ಅಂತರದಿಂದ ಗೆಲುವು ದಾಖಲಿಸಿದರು.

ಸಿಂಧು ಜಪಾನ್ ಆಟಗಾರ್ತಿ ಒಹೊರಿ ವಿರುದ್ಧ ಈ ತನಕ ಆಡಿರುವ ಎಲ್ಲ 8 ಪಂದ್ಯಗಳಲ್ಲಿ ಜಯ ಸಾಧಿಸಿ ಅಜೇಯ ದಾಖಲೆ ಕಾಯ್ದುಕೊಂಡಿದ್ದಾರೆ. ರಿಯೋ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ಜಯಿಸಿರುವ ಸಿಂಧು ಕಳೆದ ವಾರ ಜಕಾರ್ತದಲ್ಲಿ ನಡೆದಿದ್ದ ಇಂಡೋನೇಶ್ಯ ಓಪನ್‌ನಲ್ಲಿ ಒಹೊರಿ ಅವರನ್ನು ಸೋಲಿಸಿದ್ದರು.

ಬುಧವಾರ ನಡೆದಿದ್ದ ಮೊದಲ ಸುತ್ತಿನ ಪಂದ್ಯದಲ್ಲಿ ಚೀನಾದ ಹಾನ್ ಯು ಅವರನ್ನು 21-9, 21-17 ಅಂತರದಿಂದ ಜಯಸಾಧಿಸಿರುವ ಸಿಂಧು ಟೂರ್ನಿಯಲ್ಲಿ ಶುಭಾರಂಭ ಮಾಡಿದ್ದರು.

ಪ್ರಣೀತ್ ಕ್ವಾರ್ಟರ್ ಫೈನಲ್‌ಗೆ: ಮೊದಲ ಸುತ್ತಿನ ಪಂದ್ಯದಲ್ಲಿ ಜಪಾನ್‌ನ ಕೆಂಟಾ ನಿಶಿಮೊಟೊರನ್ನು ಸುಲಭವಾಗಿ ಮಣಿಸಿದ್ದ ಬಿ.ಸಾಯಿ ಪ್ರಣೀತ್ ಗುರುವಾರ ಕೇವಲ 45 ನಿಮಿಷಗಳಲ್ಲಿ ಕೊನೆಗೊಂಡ ಪುರುಷರ ಸಿಂಗಲ್ಸ್‌ನ ಎರಡನೇ ಸುತ್ತಿನ ಪಂದ್ಯದಲ್ಲಿ ಜಪಾನ್‌ನ ಕಾಂಟಾ ಸುನೆಯಮಾರನ್ನು 21-13, 21-16 ನೇರ ಗೇಮ್‌ಗಳ ಅಂತರದಿಂದ ಮಣಿಸಿದ್ದಾರೆ.

ಎರಡನೇ ಸುತ್ತಿನಲ್ಲಿ ಸುಲಭ ಜಯ ಸಾಧಿಸಿರುವ ಪ್ರಣೀತ್ ಮುಂದಿನ ಸುತ್ತಿನಲ್ಲಿ ಟಾಮ್ಮಿ ಸುಗಿಯಾರ್ಟೊರನ್ನು ಎದುರಿಸಲಿದ್ದಾರೆ.

ಪುರುಷರ ಸಿಂಗಲ್ಸ್‌ನ ಇತರ ಪಂದ್ಯಗಳಲ್ಲಿ ಭಾರತದ ಆಟಗಾರರು ನಿರಾಸೆಗೊಳಿಸಿದ್ದಾರೆ. ಮೊದಲ ಸುತ್ತಿನಲ್ಲಿ ಕಿಡಂಬಿ ಶ್ರೀಕಾಂತ್‌ರನ್ನು ಸೋಲಿಸಿ ಹೊರಗಟ್ಟಿದ್ದ ಎಚ್.ಎಸ್ ಪ್ರಣಯ್ ಎರಡನೇ ಸುತ್ತಿನ ಪಂದ್ಯದಲ್ಲಿ ಡೆನ್ಮಾರ್ಕ್ ನ ರಾಸ್ಮಸ್ ಗೆಮ್‌ಕೊ ಎದುರು 9-21, 15-21 ಅಂತರದಿಂದ ಸೋಲನುಭವಿಸಿ ಟೂರ್ನಿಯಿಂದ ಹೊರ ನಡೆದಿದ್ದಾರೆ.

► ಸಾತ್ವಿಕ್‌ಸಾಯಿರಾಜ್-ಚಿರಾಗ್ ಶೆಟ್ಟಿ ಅಂತಿಮ-8ಕ್ಕೆ: ಪುರುಷರ ಡಬಲ್ಸ್ ಪಂದ್ಯದಲ್ಲಿ ಭಾರತದ ಜೋಡಿ ಸಾತ್ವಿಕ್‌ಸಾಯಿರಾಜ್ ರಾನಿಕ್‌ರೆಡ್ಡಿ ಹಾಗೂ ಚಿರಾಗ್ ಶೆಟ್ಟಿ ಚೀನಾದ ಹ್ವಾಂಗ್ ಕೈ ಕ್ಸಿಯಾಂಗ್ ಹಾಗೂ ಲಿಯು ಚೆಂಗ್‌ರನ್ನು 15-21, 21-11, 21-19 ಗೇಮ್‌ಗಳ ಅಂತರದಿಂದ ಸೋಲಿಸುವುದರೊಂದಿಗೆ ಅಂತಿಮ-8ರ ಘಟ್ಟಕ್ಕೆ ತಲುಪಿದರು.

ಆದರೆ, ಮಿಕ್ಸೆಡ್ ಡಬಲ್ಸ್‌ನಲ್ಲಿ ಅಶ್ವಿನಿ ಪೊನ್ನಪ್ಪ ಹಾಗೂ ಸಾತ್ವಿಕ್‌ಸಾಯಿರಾಜ್ ರಾನಿಕ್‌ರೆಡ್ಡಿ ಥಾಯ್ಲೆಂಡ್‌ನ ಸಪ್‌ಸಿರೀ ಟರಟ್ಟನಚೈ ಹಾಗೂ ಡೆಚಾಪೊಲ್ ಪುವಾರನುಕ್ರೊಹ್ ವಿರುದ್ಧ 39 ನಿಮಿಷಗಳ ಕಾಲ ನಡೆದ ಹಣಾಹಣಿಯಲ್ಲಿ 16-21, 17-21 ಅಂತರದಿಂದ ಸೋತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News