ಕಾರ್ಗಿಲ್ ಶೌರ್ಯಕ್ಕಾಗಿ ವೀರ ಚಕ್ರ ಪಡೆದ ಯೋಧ ಈಗ ಸಂಚಾರ ನಿಯಂತ್ರಿಸುವ ಹೆಡ್ ಕಾನ್‍ಸ್ಟೇಬಲ್ !

Update: 2019-07-26 05:52 GMT
Photo: indianexpress.com

ಅಮೃತಸರ್ : ಪಂಜಾಬ್ ರಾಜ್ಯದ ಸಂಗ್ರೂರ್ ಜಿಲ್ಲೆಯ ಪುಟ್ಟ ಪಟ್ಟಣ ಭವಾನಿಘರ್ ಎಂಬಲ್ಲಿನ ನಾಲ್ಕು ರಸ್ತೆಗಳು ಕೂಡುವ ಸ್ಥಳದಲ್ಲಿ ಸಂಚಾರ ನಿಯಂತ್ರಿಸುವ ತಮ್ಮ ಕರ್ತವ್ಯವನ್ನು ತನ್ಮಯತೆಯಿಂದ ನಿರ್ವಹಿಸುತ್ತಿರುವ ಹೆಡ್ ಕಾನ್‍ಸ್ಟೇಬಲ್ ಸತ್ಪಾಲ್ ಸಿಂಗ್ ಅವರನ್ನು ನೀವು ಕಾಣಬಹುದು. ಆದರೆ ಅವರು ಧರಿಸಿರುವ ಸಮವಸ್ತ್ರವನ್ನು ಸೂಕ್ಷ್ಮವಾಗಿ ಗಮನಿಸಿದರೆ ಅವರ ಶರ್ಟ್‍ನಲ್ಲಿ ನಾಲ್ಕು ಪದಕಗಳ ಸಾಲು  ಹಾಗೂ ಅರ್ಧ ನೀಲಿ ಹಾಗೂ  ಅರ್ಧ ಕೇಸರಿ ಬಣ್ಣದ ವೀರ ಚಕ್ರ ಪದಕವೂ ಕಾಣಿಸುತ್ತದೆ.

ಇಪ್ಪತ್ತು ವರ್ಷಗಳ ಹಿಂದೆ ಇವರು ಭಾರತೀಯ ಸೇನೆಯ ಸಿಪಾಯಿಯಾಗಿದ್ದವರು. ಕಾರ್ಗಿಲ್ ಯುದ್ಧದ ಸಂದರ್ಭ ಟೈಗರ್ ಹಿಲ್ ನಲ್ಲಿ ಪಾಕ್ ಸೇನೆಯ ಪ್ರತಿ ದಾಳಿಯ ವಿರುದ್ಧ ಸೆಣಸಾಡುತ್ತಾ  ಪಾಕಿಸ್ತಾನದ ನಾರ್ದರ್ನ್ ಲೈಟ್ ಇನ್ಫೆಂಟ್ರಿಯ ಕ್ಯಾಪ್ಟನ್ ಕರ್ನಲ್ ಶೇರ್ ಖಾನ್ ಹಾಗೂ ಇತರ ಮೂವರನ್ನು ಇವರು ಹತ್ಯೆಗೈದಿದ್ದರು. ಕರ್ನಲ್ ಶೇರ್ ಖಾನ್ ಅವರಿಗೆ ಪಾಕಿಸ್ತಾನದ ಮಿಲಿಟರಿಯ ಅತ್ಯುನ್ನತ ಗೌರವ ನಿಶಾನ್-ಇ-ಹೈದರ್ ಕೂಡ ಪ್ರದಾನ ಮಾಡಲಾಗಿತ್ತೆಂಬುದನ್ನು ಇಲ್ಲಿ ಸ್ಮರಿಸಬಹುದು.

ಸತ್ಪಾಲ್ ಸಿಂಗ್ ಅವರು ಟೈಗರ್ ಹಿಲ್ ವಶಪಡಿಸಿಕೊಳ್ಳುವ ಕೆಲಸ ವಹಿಸಲಾಗಿದ್ದ  19 ಗ್ರೆನೆಡಿಯರ್ಸ್ ಗೆ ಸಹಾಯ ಮಾಡುವ ನಿಟ್ಟಿನಲ್ಲಿ ನೇಮಕಗೊಂಡಿದ್ದ ಇಬ್ಬರು ಅಧಿಕಾರಿಗಳು, ನಾಲ್ಕು ಜೂನಿಯರ್ ಕಮಿಷನ್ಡ್ ಅಧಿಕಾರಿಗಳು ಹಾಗೂ 46 ಇತರ ಶ್ರೇಣಿಯ ಸಿಬ್ಬಂದಿಗಳಿದ್ದ ತಂಡದ ಭಾಗವಾಗಿದ್ದರು.

ಟೈಗರ್ ಹಿಲ್ ನಲ್ಲಿ ಪಾಕ್ ದಾಳಿಯನ್ನು ಹಿಮ್ಮೆಟ್ಟಿಸುವ ಕಾರ್ಯದಲ್ಲಿ  18 ಸೇನಾ ಸಿಬ್ಬಂದಿಗಳು ಹತರಾಗಿದ್ದರು. ಥರಗುಟ್ಟುವ ಚಳಿಯ ವಾತಾವರಣದಲ್ಲಿ ಸೆಣಸಾಡುತ್ತಿದ್ದ ಸತ್ಪಾಲ್ ಮತ್ತಿತರರ ಬಳಿ ಅವರು ಧರಿಸಿದ್ದ ಸಮವಸ್ತ್ರದ ಹೊರತಾಗಿ ಬೇರೆ ಬಟ್ಟೆಯಿರಲಿಲ್ಲ. ಜುಲೈ 7, 1999ರಿಂದ  ಆರಂಭಗೊಂಡು ಪಾಕಿಸ್ತಾನದ ದಾಳಿ ನಡೆಯುತ್ತಲೇ ಇತ್ತು. ಈ ಹೋರಾಟದಲ್ಲಿ ಸತ್ಪಾಲ್ ಸಿಂಗ್ ಅವರಿಗೆ ನಾಲ್ಕು ಗುಂಡುಗಳು ತಾಗಿದರೂ ಅವರು ಶೇರ್ ಖಾನ್, ಆತನ ರೇಡಿಯೋ ಆಪರೇಟರ್ ಹಾಗೂ ಇಬ್ಬರು ಜವಾನರನ್ನು ಸಾಯಿಸಿದ್ದರು. ಅಪ್ರತಿಮ ಶೌರ್ಯದ ಅಧಿಕಾರಿಯಾಗಿದ್ದ ಕರ್ನಲ್ ಶೇರ್ ಖಾನ್ ಸಾವು ಪಾಕಿಸ್ತಾನದ ಸಿಪಾಯಿಗಳ ಸ್ಥೈರ್ಯ ಉಡುಗಿಸಿತ್ತು. ಆದರೆ ತಾನು ಕೊಂದಿದ್ದು ಯಾರನ್ನು ಎಂದು ಸತ್ಪಾಲ್ ಅವರಿಗೆ ಆಗ ತಿಳಿದಿರಲಿಲ್ಲ.

ಟೈಗರ್ ಹಿಲ್ ವಶಪಡಿಸಿಕೊಳ್ಳುವ ಈ ಹೋರಾಟದಲ್ಲಿ ಕೆಚ್ಚೆದೆಯಿಂದ ಪಾಲ್ಗೊಂಡ ಸತ್ಪಾಲ್ ಅವರ ಹೆಸರನ್ನು ಶೌರ್ಯ ಚಕ್ರಕ್ಕೆ ಬ್ರಿಗೇಡಿಯರ್ ಬಜ್ವಾ ಶಿಫಾರಸು ಮಾಡಿದ್ದರು.

ಈಗ 46 ವರ್ಷದ ಸತ್ಪಾಲ್ 2009ರಲ್ಲಿ ಸೇನೆಯಿಂದ ನಿವೃತ್ತರಾದ ನಂತರ ಪಂಜಾಬ್ ಪೊಲೀಸ್ ಇಲಾಖೆ ಸೇರಿದ್ದರು.

"ನಾನು ತಪ್ಪಾದ ನಿರ್ಧಾರ ಕೈಗೊಂಡಿರಬಹುದು. ನಾನು ಪಡೆದ ವೀರ ಚಕ್ರಕ್ಕೆ ತಕ್ಕ ಮಾನ್ಯತೆ ದೊರೆಯಲಿಲ್ಲ. ಪದಕ ಗೆದ್ದ ಕ್ರೀಡಾಳುಗಳಿಗೂ ಉನ್ನತ ಹುದ್ದೆಗಳು ದೊರಕುತ್ತವೆ. ಪಾಕಿಸ್ತಾನ ಮಿಲಿಟರಿಯ ಅತ್ಯುನ್ನತ  ಪ್ರಶಸ್ತಿ ಪಡೆದ ವ್ಯಕ್ತಿಯನ್ನು ಹೋರಾಟದಲ್ಲಿ ನಾನು ಸಾಯಿಸಿದೆ. ಆದರೆ ದೇವರ ದಯದಿಂದ ನಾನು ಬದುಕುಳಿದೆ'' ಎಂದು ಅವರು ಹೇಳುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News