×
Ad

ಗುಂಪಿನಿಂದ ಥಳಿತ ಪ್ರಕರಣ: ಕೇಂದ್ರ ಸಹಿತ 10 ರಾಜ್ಯಗಳಿಗೆ ಸುಪ್ರೀಂಕೋರ್ಟ್ ನೋಟಿಸ್

Update: 2019-07-26 13:16 IST

ಹೊಸದಿಲ್ಲಿ,ಜು.26: ಗುಂಪಿನಿಂದ ಥಳಿತ ಘಟನೆಯನ್ನ್ನು ನಿಯಂತ್ರಿಸಲು ಯಾವ ಕ್ರಮ ಕೈಗೊಂಡಿದ್ದೀರಿ ಎಂದು ವಿವರಣೆ ನೀಡುವಂತೆ ಕೇಂದ್ರ ಸರಕಾರ ಹಾಗೂ 10 ರಾಜ್ಯಗಳಿಗೆ ಸುಪ್ರೀಂಕೋರ್ಟ್ ಶುಕ್ರವಾರ ನೋಟಿಸ್ ಕಳುಹಿಸಿಕೊಟ್ಟಿದೆ.

ಗುಂಪಿನ ಥಳಿತದಂತಹ ಹಿಂಸಾತ್ಮಕ ಘಟನೆಯನ್ನು ನಿಯಂತ್ರಿಸಲು ಸುಪ್ರೀಂಕೋರ್ಟ್ ನೀಡಿರುವ 10 ಅಂಶಗಳ ನಿಯಮಗಳನ್ನು ಯಾವ ರಾಜ್ಯಗಳೂ ಅನುಷ್ಠಾನಕ್ಕೆ ತಂದಿಲ್ಲ ಎಂದು ಆರೋಪಿಸಿ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಕೈಗೆತ್ತಿಕೊಂಡ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ನೇತೃತ್ವದ ನ್ಯಾಯಪೀಠವು ಕೇಂದ್ರ ಸರಕಾರ, ರಾಷ್ಟ್ರೀಯ ಮಾನವ ಹಕ್ಕು ಆಯೋಗ ಹಾಗೂ ಉತ್ತರಪ್ರದೇಶ, ಆಂಧ್ರಪ್ರದೇಶ, ದಿಲ್ಲಿ ಹಾಗೂ ರಾಜಸ್ಥಾನ ಸಹಿತ 10 ರಾಜ್ಯಗಳಿಗೆ ನೋಟಿಸ್‌ನ್ನು ಜಾರಿಗೊಳಿಸಿದೆ.

ಸೆಲೆಬ್ರಿಟಿಗಳ ಎರಡು ಬಣಗಳ ಮಧ್ಯೆ ಪತ್ರ ಸಮರ ಆರಂಭವಾದ ಬಳಿಕ ಸುಪ್ರೀಂಕೋರ್ಟ್ ನೋಟಿಸ್ ಕಳುಹಿಸಿದೆ. 49 ಬುದ್ದಿಜೀವಿಗಳು, ಕಲಾವಿದರು ಹಾಗೂ ವೃತ್ತಿಪರರು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಉದ್ದೇಶಿಸಿ ಪತ್ರವನ್ನು ಬರೆದಿದ್ದರು. ಮುಸ್ಲಿಮರು, ದಲಿತರು ಹಾಗೂ ಇತರ ಅಲ್ಪ ಸಂಖ್ಯಾತರ ಮೇಲಿನ ಗುಂಪಿನಿಂದ ಥಳಿತ ಪ್ರಕರಣಕ್ಕೆ ಅಂತ್ಯ ಹಾಡುವಂತೆ ಆಗ್ರಹಿಸಿದ್ದರು.

ಕೇಂದ್ರ ಸರಕಾರ ತಕ್ಷಣವೇ ಈ ಆರೋಪವನ್ನು ತಿರಸ್ಕರಿಸಿತ್ತು. ಸುಪ್ರೀಂಕೋರ್ಟ್ ಗುಂಪಿನಿಂದ ಥಳಿತ ಹಿಂಸಾಚಾರ ಘಟನೆಗೆ ಸಂಬಂಧಿಸಿದ ಅರ್ಜಿಯೊಂದನ್ನು ವಿಚಾರಣೆಗೆ ಕೈಗೆತ್ತಿಕೊಳ್ಳಲು ಕೆಲವು ಗಂಟೆಗಳ ಮೊದಲು 62 ಸೆಲೆಬ್ರಿಟಿಗಳ ಮತ್ತೊಂದು ಬಣ 49 ಸೆಲೆಬ್ರಿಟಿಗಳ ಮೊದಲ ಬಹಿರಂಗ ಪತ್ರಕ್ಕೆ ಉತ್ತರ ನೀಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News