ಲೋಕಸಭೆಯಲ್ಲಿ ಆಕ್ಷೇಪಾರ್ಹ ಹೇಳಿಕೆಗಾಗಿ ಅಝಂ ಖಾನ್ ಕ್ಷಮೆ ಯಾಚನೆಗೆ ಒತ್ತಾಯ

Update: 2019-07-26 14:18 GMT

ಹೊಸದಿಲ್ಲಿ,ಜು.26: ಗುರುವಾರ ಸದನ ಕಲಾಪಗಳ ಸಂದರ್ಭ ಬಿಜೆಪಿ ಸಂಸದೆ ರಮಾ ದೇವಿ ಅವರ ಕುರಿತು ಎಸ್‌ಪಿ ನಾಯಕ ಅಝಂ ಖಾನ್ ಅವರ ಆಕ್ಷೇಪಾರ್ಹ ಹೇಳಿಕೆಯನ್ನು ಶುಕ್ರವಾರ ಲೋಕಸಭೆಯಲ್ಲಿ ಸಂಸದೆಯರು ಸೇರಿದಂತೆ ಹಲವಾರು ಸದಸ್ಯರು ತೀವ್ರವಾಗಿ ಖಂಡಿಸಿದರು. ಖಾನ್ ಅವರು ತನ್ನ ಹೇಳಿಕೆಗಾಗಿ ಕ್ಷಮೆ ಯಾಚಿಸಬೇಕು ಇಲ್ಲವೇ ಅವರನ್ನು ಸದನದಿಂದ ಅಮಾನತುಗೊಳಿಸಬೇಕು ಎಂದು ಕೇಂದ್ರ ಕಾನೂನು ಸಚಿವ ರವಿಶಂಕರ್ ಪ್ರಸಾದ್ ಅವರು ಆಗ್ರಹಿಸಿದರು.

ಇದು ಪುರುಷರು ಸೇರಿದಂತೆ ಸದನದ ಎಲ್ಲ ಸದಸ್ಯರಿಗೆ ಕಪ್ಪು ಚುಕ್ಕೆಯಾಗಿದೆ ಎಂದು ಹೇಳಿದ ಸಚಿವೆ ಸ್ಮ್ರತಿ  ಇರಾನಿ ಅವರು,ನಾವು ಮೂಕಪ್ರೇಕ್ಷಕರಾಗಿರುವಂತಿಲ್ಲ. ಸ್ವೀಕಾರಾರ್ಹವಲ್ಲದ ಹೇಳಿಕೆಯ ವಿರುದ್ಧ ನಾವೆಲ್ಲ ಒಂದಾಗಿ ಧ್ವನಿಯೆತ್ತಬೇಕು ಎಂದರು.

ಸದನದ ಸದಸ್ಯರು ಈ ಹೇಳಿಕೆಯನ್ನು ಖಂಡಿಸುತ್ತಿರುವುದು ಉತ್ತೇಜಕವಾಗಿದೆ ಎಂದ ವಿತ್ತಸಚಿವೆ ನಿರ್ಮಲಾ ಸೀತಾರಾಮನ್ ಅವರು ತಟಸ್ಥ ನೀತಿಯನ್ನು ಅನುಸರಿಸಿದ್ದ ಸದಸ್ಯರನ್ನು ಟೀಕಿಸಿದರು. ಮಹಿಳೆಯರಿಗೆ ಸಂಬಂಧಿಸಿದ ವಿಷಯವನ್ನು ರಾಜಕೀಯಗೊಳಿಸುವುದು ಅತಿರೇಕದ್ದಾಗಿದೆ. ಇದರ ವಿರುದ್ಧ ನಾವೆಲ್ಲರೂ ಒಂದಾಗಿ ನಿಲ್ಲಬೇಕಿದೆ. ಹೀಗಿರುವಾಗ ಕೆಲವರು ಹಿಂಜರಿಯುತ್ತಿರುವುದೇಕೆ ಎಂದು ಅವರು ಪ್ರಶ್ನಿಸಿದರು.

ಗುರುವಾರ ಸದನದಲ್ಲಿ ತ್ರಿವಳಿ ತಲಾಖ್ ಮೇಲಿನ ಚರ್ಚೆ ಸಂದರ್ಭ ಖಾನ್ ಈ ಆಕ್ಷೇಪಾರ್ಹ ಹೇಳಿಕೆಯನ್ನು ನೀಡಿದ್ದರು. ಸ್ಪೀಕರ್ ಓಂ ಬಿರ್ಲಾ ಅವರ ಅನುಪಸ್ಥಿತಿಯಲ್ಲಿ ಪೀಠದಲ್ಲಿದ್ದ ರಮಾದೇವಿ ಅವರು,ಮಾತನಾಡುವಾಗ ಗದ್ದಲದತ್ತ ಗಮನ ನೀಡದೇ ತನ್ನತ್ತ ನೋಡುವಂತೆ ಖಾನ್‌ಗೆ ಸೂಚಿಸಿದ್ದರು. ಈ ವೇಳೆ ಖಾನ್,‘ನಾನು ನಿಮ್ಮನ್ನು ಎಷ್ಟೊಂದು ಇಷ್ಟಪಡುತ್ತೇನೆಂದರೆ ನಿಮ್ಮ ಕಣ್ಣುಗಳಲ್ಲಿ ಕಣ್ಣುಗಳನ್ನಿಟ್ಟು ನೋಡುತ್ತಲೇ ಇರಬೇಕು ಎಂದು ನಾನು ಬಯಸುತ್ತೇನೆ ’ ಎಂದು ಪ್ರತಿಕ್ರಿಯಿಸಿದ್ದರು.

 ಶುಕ್ರವಾರ ರಮಾದೇವಿ ಅವರು,ಖಾನ್ ಎಂದಿಗೂ ಮಹಿಳೆಯರನ್ನು ಗೌರವಿಸಿಲ್ಲ ಎಂದು ಟೀಕಿಸಿದರಲ್ಲದೆ ಬಿಜೆಪಿ ನಾಯಕಿ ಜಯಪ್ರದಾ ವಿರುದ್ಧ ಅವರ ಆಕ್ಷೇಪಾರ್ಹ ಹೇಳಿಕೆಯನ್ನು ಪ್ರಸ್ತಾಪಿಸಿದರು. ಅವರಿಗೆ ಲೋಕಸಭೆಯಲ್ಲಿರಲು ಯಾವ ಹಕ್ಕೂ ಇಲ್ಲ. ಅವರನ್ನು ವಜಾಗೊಳಿಸುವಂತೆ ತಾನು ಸ್ಪೀಕರ್‌ರನ್ನು ಆಗ್ರಹಿಸುತ್ತೇನೆ. ಖಾನ್ ಕ್ಷಮೆ ಕೋರಲೇಬೇಕು ಎಂದು ಹೇಳಿದರು.

ತೃಣಮೂಲ ಸಂಸದೆ ಮಿಮಿ ಚಕ್ರವರ್ತಿ ಅವರೂ ಖಾನ್ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿದರು.

ಹೇಳಿಕೆಯನ್ನು ಖಂಡಿಸಿದ ಕಾಂಗ್ರೆಸ್ ನಾಯಕ ಆಧಿರ್ ರಂಜನ್ ಚೌಧುರಿ ಅವರು,ಮಹಿಳೆಯರಿಗೆ ಅಗೌರವವನ್ನು ತನ್ನ ಪಕ್ಷವು ವಿರೋಧಿಸುತ್ತದೆ. ಈ ಹಿಂದೆ ಸೋನಿಯಾ ಗಾಂಧಿಯವರನ್ನೂ ಸಂಸತ್ತಿನಲ್ಲಿ ‘ಇಟಲಿಯ ಕೈಗೊಂಬೆ ’ ಇತ್ಯಾದಿ ಹೆಸರುಗಳಿಂದ ಕರೆಯಲಾಗಿತ್ತು ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News