×
Ad

ಭೀಮಾ ಕೋರೆಗಾಂವ್ ಪ್ರಕರಣ: ಎಫ್‌ಐಆರ್ ರದ್ದುಗೊಳಿಸುವಂತೆ ಕೋರಿದ ನವ್ಲಾಖಾ ಮನವಿ ಕಾಯ್ದಿರಿಸಿದ ಸುಪ್ರೀಂ

Update: 2019-07-27 00:05 IST

ಬಾಂಬೈ, ಜು. 26: ಮಾವೋವಾದಿಗಳೊಂದಿಗೆ ನಂಟು ಹೊಂದಿರುವುದಾಗಿ ಆರೋಪಿಸಿ ತನ್ನ ವಿರುದ್ಧ ದಾಖಲಿಸಲಾದ ಎಫ್‌ಐಆರ್ ಅನ್ನು ರದ್ದುಗೊಳಿಸುವಂತೆ ಕೋರಿ ಸಾಮಾಜಿಕ ಹೋರಾಟಗಾರ ಗೌತಮ್ ನವ್ಲಾಖಾ ಸಲ್ಲಿಸಿದ ಮನವಿಯ ತೀರ್ಪನ್ನು ಬಾಂಬೆ ಉಚ್ಚ ನ್ಯಾಯಾಲಯ ಶುಕ್ರವಾರ ಕಾದಿರಿಸಿದೆ. ಪುಣೆ ಪೊಲೀಸರು ಸಲ್ಲಿಸಿದ ಕೆಲವು ದಾಖಲೆಗಳು ನವ್ಲಾಖಾ ಅಮಾಯಕ ಎಂದು ಹೇಳುತ್ತದೆ. ಉಳಿದ ದಾಖಲೆಗಳ ಬಗ್ಗೆ ಇನ್ನಷ್ಟು ತನಿಖೆ ನಡೆಸುವ ಅಗತ್ಯ ಇದೆ ಎಂದು ನ್ಯಾಯಮೂರ್ತಿ ರಂಜಿತ್ ಮೋರೆ ಹಾಗೂ ಭಾರತಿ ಡಾಂಗ್ರೆ ಅವರನ್ನು ಒಳಗೊಂಡ ಪೀಠ ಹೇಳಿದೆ. ತೀರ್ಪು ಪ್ರಕಟವಾಗುವ ವರೆಗೆ ನವ್ಲಾಖ್‌ಗೆ ಬಂಧನದಿಂದ ರಕ್ಷಣೆಯನ್ನು ಕೂಡ ನ್ಯಾಯಾಲಯ ನೀಡಿದೆ.

ಎಲ್ಗಾರ್ ಪರಿಷತ್ ಹಾಗೂ ಅನಂತರ ಪುಣೆಯ ಸಮೀಪದ ಭೀಮಾ ಕೋರೆಗಾಂವ್‌ನಲ್ಲಿ 2017 ಡಿಸೆಂಬರ್ 31 ಹಾಗೂ 2018 ಜನವರಿ 1ರ ನಡುವೆ ಸಂಭವಿಸಿದ ಹಿಂಸಾಚಾರ ಪ್ರಕರಣಗಳಲ್ಲಿ ನವ್ಲಾಖಾ ಆರೋಪಿಯಾಗಿದ್ದಾರೆ. ಈ ಪ್ರಕರಣದಲ್ಲಿ ಐವರು ಆರೋಪಿಗಳಲ್ಲಿ ನವ್ಲಾಖಾ ಕೂಡ ಒಬ್ಬರು. ಕೊನೆಯ ವಿಚಾರಣೆಯಲ್ಲಿ ಪುಣೆ ಪೊಲೀಸ್ ಪರ ನ್ಯಾಯವಾದಿ ಅರುಣ್ ಪೈ, ಭೀಮಾ ಕೋರೆಗಾಂವ್ ಘಟನೆಯೊಂದಿಗೆ ನವ್ಲಾಖಾ ಸಂಬಂಧ ಹೊಂದಿರುವ ಬಗ್ಗೆ ಪೊಲೀಸರಲ್ಲಿ ಸಾಕಸ್ಟು ಪುರಾವೆಗಳು ಇವೆ ಎಂದರು. ನವ್ಲಾಖಾ ಅವರಿಗೆ ನಕ್ಸಲ್ ಸಂಘಟನೆ ಹಾಗೂ ಭಯೋತ್ಪಾದಕ ಸಂಘಟನೆಯಾದ ಹಿಜ್ಬುಲ್ ಮುಜಾಹಿದ್ದೀನ್‌ನೊಂದಿಗೆ ಸಂಪರ್ಕ ಇದೆ ಎಂದು ಕೂಡ ಅವರು ಹೇಳಿದರು. ಆದರೆ, ಶುಕ್ರವಾರ ನವ್ಲಾಖಾ ಪರ ನ್ಯಾಯವಾದಿ ಯುಗ್ ಚೌಧರಿ ಈ ಆರೋಪವನ್ನು ನಿರಾಕರಿಸಿದರು. ನವ್ಲಾಖಾ ಅವರ ಕಕ್ಷಿಗಾರನ ಹೆಸರಿನಲ್ಲಿ ಪತ್ತೆಯಾದ ಕೆಲವು ದಾಖಲೆಗಳು ತಮ್ಮಲ್ಲಿ ಇದೆ ಎಂದು ಪೊಲೀಸರು ಪ್ರತಿಪಾದಿಸುವುದರಿಂದ ನವ್ಲಾಖಾ ಭಯೋತ್ಪಾದಕ ಎಂದು ಸಾಬೀತುಪಡಿಸಲು ಸಾಧ್ಯವಿಲ್ಲ ಎಂದು ಅವರು ವಾದಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News