ಫೇಸ್ ಬುಕ್ ವೀಡಿಯೊದ ಅಣಕು ಎನ್‌ಕೌಂಟರ್‌ನಲ್ಲಿ ಗನ್‌ಗಳನ್ನು ಝಳಪಿಸಿದ್ದ ಉ.ಪ್ರ.ಪೊಲೀಸರ ಎತ್ತಂಗಡಿ

Update: 2019-07-27 17:57 GMT

ಲಕ್ನೋ, ಜು.27: ಸ್ವ ಪ್ರಚಾರಕ್ಕಾಗಿ ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದ್ದ ಅಣಕು ಎನ್‌ಕೌಂಟರ್‌ನ ವೀಡಿಯೊದಲ್ಲಿ ಕರ್ತವ್ಯ ನಿರ್ವಹಣೆಗಾಗಿ ಇಲಾಖೆಯು ತಮಗೆ ನೀಡಿದ್ದ ಗನ್‌ಗಳನ್ನು ಝಳಪಿಸಿದ್ದಕ್ಕಾಗಿ ಉತ್ತರ ಪ್ರದೇಶದ ವಿಶೇಷ ಕಾರ್ಯಾಚರಣೆ ತಂಡ ‘ಸ್ವಾಟ್’ನ ಐವರು ಪೊಲೀಸರನ್ನು ವರ್ಗಾವಣೆಗೊಳಿಸಲಾಗಿದೆ. ಈ ಪೈಕಿ ಓರ್ವ ಪೊಲೀಸ್ ಈ ವೀಡಿಯೊವನ್ನು ತನ್ನ ಫೇಸ್‌ಬುಕ್ ಪ್ರೊಫೈಲ್‌ನಲ್ಲಿ ಶೇರ್ ಮಾಡಿಕೊಂಡಿದ್ದ. ಈ ಪೊಲೀಸ್ ಸಿಬ್ಬಂದಿಗಳ ವಿರುದ್ಧ ವಿಚಾರಣೆಗೆ ಆದೇಶಿಸಲಾಗಿದೆ.

ಬಸ್ತಿಯಲ್ಲಿ ಸ್ವಾಟ್‌ನ ನೇತೃತ್ವ ವಹಿಸಿದ್ದ ಪೊಲೀಸ್ ಇನ್‌ಸ್ಪೆಕ್ಟರ್ ತನ್ನ ಫೇಸ್‌ಬುಕ್ ಪೇಜ್‌ನಲ್ಲಿ ಅಪ್ಲೋಡ್ ಮಾಡಿರುವ ಎರಡು ನಿಮಿಷಗಳ ಈ ವೀಡಿಯೊದಲ್ಲಿ ತಂಡದ ಸದಸ್ಯರು ಕೈಗಳಲ್ಲಿ ಗನ್‌ಗಳನ್ನು ಝಳಪಿಸುತ್ತ ಹೊಲವೊಂದರಲ್ಲಿ ಸಾಗುತ್ತಿರುವ ದೃಶ್ಯವನ್ನು ಸ್ಲೋ ಮೋಷನ್‌ನಲ್ಲಿ ತೋರಿಸಲಾಗಿದ್ದು,ಹಿನ್ನೆಲೆಯಲ್ಲಿ ಹರ್ಯಾಣ್ವಿ ಗೀತೆಯೊಂದನ್ನು ಅಳವಡಿಸಲಾಗಿದೆ.

ತನ್ನ ಟ್ವಿಟರ್ ಪೇಜ್‌ನಲ್ಲಿ ವೀಡಿಯೊಕ್ಕೆ ಪ್ರತಿಕ್ರಿಯಿಸಿರುವ ಉ.ಪ್ರದೇಶ ಪೊಲೀಸ್ ಇಲಾಖೆಯು,ವೃತ್ತಿಪರವಲ್ಲದ ರೀತಿಯಲ್ಲಿ ಶಸ್ತ್ರಾಸ್ತ್ರಗಳ ಪ್ರದರ್ಶನಕ್ಕೆ ತಾನು ಅನುಮತಿ ನೀಡಿರಲಿಲ್ಲ ಎಂದು ತಿಳಿಸಿದೆ.

ವೈರಲ್ ಆಗಿರುವ ಬಸ್ತಿ ಪೋಲಿಸ್‌ನ ಸ್ವಾಟ್ ತಂಡದ ವೀಡಿಯೊಕ್ಕೆ ಸಂಬಂಧಿಸಿದಂತೆ ಡಿಜಿಪಿ ಒ.ಪಿ.ಸಿಂಗ್ ಅವರು ಇಡೀ ಸ್ವಾಟ್ ತಂಡವನ್ನು ಪೊಲೀಸ್ ಲೈನ್ಸ್‌ಗೆ ವರ್ಗಾವಣೆಗೊಳಿಸುವಂತೆ ಬಸ್ತಿ ಎಸ್‌ಪಿಗೆ ಆದೇಶಿಸಿದ್ದಾರೆ ಮತ್ತು ಈ ಬಗ್ಗೆ ವಿಚಾರಣೆ ನಡೆಯುತ್ತಿದೆ ಎಂದು ಟ್ವೀಟ್‌ನಲ್ಲಿ ಹೇಳಿದೆ.

2017ರಲ್ಲಿ ಆದಿತ್ಯನಾಥ್ ಅವರು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ರಾಜ್ಯದಲ್ಲಿ ಎನ್‌ಕೌಂಟರ್‌ಗಳಲ್ಲಿ ನೂರಕ್ಕೂ ಅಧಿಕ ಜನರು ಕೊಲ್ಲಲ್ಪಟ್ಟಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News