ಬಾಲಿವುಡ್ ನಟನಿಂದ 2 ಬಾಳೆಹಣ್ಣಿಗೆ 442 ರೂ. ವಸೂಲಿ ಮಾಡಿದ ಸ್ಟಾರ್ ಹೊಟೇಲ್‌ಗೆ 25 ಸಾವಿರ ರೂ. ದಂಡ

Update: 2019-07-27 18:23 GMT

 ಚಂಡಿಗಢ, ಜು. 27: ಚಂಡಿಗಢದ ಜೆ.ಡಬ್ಲ್ಯು. ಮ್ಯಾರಿಯಟ್ ಐಷಾರಾಮಿ ಹೊಟೇಲ್‌ನಲ್ಲಿ ತಂಗಿದ್ದ ಸಂದರ್ಭ ಬಾಲಿವುಡ್ ನಟ ರಾಹುಲ್ ಬೋಸ್‌ರಿಂದ ಎರಡು ಬಾಳೆ ಹಣ್ಣಿಗೆ 442.50 ರೂಪಾಯಿ ಹಣ ವಸೂಲಿ ಮಾಡಿದ ಹಿನ್ನೆಲೆಯಲ್ಲಿ ಚಂಡಿಗಢದ ಅಬಕಾರಿ ಮತ್ತು ತೆರಿಗೆ ಇಲಾಖೆ ಹೊಟೇಲ್‌ಗೆ ಶನಿವಾರ 25 ಸಾವಿರ ರೂಪಾಯಿ ದಂಡ ವಿಧಿಸಿದೆ.

ಜೆ.ಡಬ್ಲ್ಯು ಮ್ಯಾರಿಯಟ್ ಹೊಟೇಲ್ ತಾಜಾ ಹಣ್ಣುಗಳು ಹಾಗೂ ಇತರ ವಸ್ತುಗಳ ಮೇಲೆ ತೆರಿಗೆ ವಿಧಿಸುತ್ತಿರುವ ಬಗ್ಗೆ ಚಂಡಿಗಢದ ಅಬಕಾರಿ ಹಾಗೂ ತೆರಿಗೆ ಉಪ ಆಯುಕ್ತ ಆರ್.ಕೆ. ಚೌಧರಿ ನೇತೃತ್ವದ ತಂಡ ತನಿಖೆ ನಡೆಸುತ್ತಿದೆ ಹಾಗೂ ಶನಿವಾರದ ಒಳಗೆ ಪ್ರತಿಕ್ರಿಯೆ ನೀಡುವಂತೆ ಹೊಟೇಲ್ ಆಡಳಿತಕ್ಕೆ ನಿರ್ದೇಶನ ನೀಡಿದೆ.

ತಾಜಾ ಹಣ್ಣುಗಳು ಜಿಎಸ್‌ಟಿ ಅಡಿಯಲ್ಲಿ ಬರುವುದಿಲ್ಲ. ಅವು ತೆರಿಗೆ ಮುಕ್ತ. ಇದು ಹೊಟೇಲ್ ಆಡಳಿತದ ಸ್ಪಷ್ಟ ನಿಯಮ ಉಲ್ಲಂಘನೆ. ಹೊಟೇಲ್‌ನ ಆಡಳಿತ ಮಂಡಳಿ ಶನಿವಾರದ ಒಳಗೆ ಪ್ರತಿಕ್ರಿಯೆ ಸಲ್ಲಿಸುವ ನಿರೀಕ್ಷೆ ಇದೆ. ಕಾಯ್ದೆ ಉಲ್ಲಂಘಿಸುವರಿಗೆ 25 ಸಾವಿರ ರೂಪಾಯಿ ವರೆಗೆ ದಂಡ ವಿಧಿಸಲಾಗುವುದು ಎಂದು ಕೇಂದ್ರಾಡಳಿತ ಪ್ರದೇಶದ ಅಬಕಾರಿ ಹಾಗೂ ತೆರಿಗೆ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ನಾವು ಕಾಯ್ದೆ ಉಲ್ಲಂಘನೆಯನ್ನು ಎಲ್ಲ ಆಯಾಮಗಳಿಂದ ಪರಿಶೀಲಿಸುತ್ತಿದ್ದೇವೆ ಹಾಗೂ ತಪ್ಪೆಸಗಿದ್ದಲ್ಲಿ ಹೊಟೇಲ್ ವಿರುದ್ಧ ಕ್ರಮ ಕೈಗೊಳ್ಳಲಿದ್ದೇವೆ ಎಂದು ಅವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News