ವಾರ್ನರ್‌ಗೆ ‘ಸ್ಯಾಂಡ್‌ಪೇಪರ್‌’ ಪ್ರದರ್ಶಿಸಿದ ಇಂಗ್ಲೆಂಡ್ ಕ್ರಿಕೆಟ್ ಅಭಿಮಾನಿಗಳು

Update: 2019-08-01 18:01 GMT

ಲಂಡನ್, ಆ.1: ಆ್ಯಶಸ್ ಸರಣಿಯ ಮೊದಲ ಟೆಸ್ಟ್ ಪಂದ್ಯ ಗುರುವಾರ ಆರಂಭವಾಗಿದೆ. ಆಸ್ಟ್ರೇಲಿಯ ಆರಂಭಿಕ ಆಟಗಾರ ಡೇವಿಡ್ ವಾರ್ನರ್ ಬೇಗನೆ ವಿಕೆಟ್ ಒಪ್ಪಿಸಿದಾಗ ಇಂಗ್ಲೆಂಡ್ ಆಟಗಾರರು ಸಂಭ್ರಮಿಸಿದರು. ಕೇವಲ 2 ರನ್ ಗಳಿಸಿದ್ದ ವಾರ್ನರ್ ಸ್ಟುವರ್ಟ್ ಬ್ರಾಡ್ ಬೀಸಿದ ಎಲ್ಬಿಡಬ್ಲು ಬಲೆಗೆ ಬಿದ್ದರು. ಆಸ್ಟ್ರೇಲಿಯ ಆಟಗಾರ ಪೆವಿಲಿಯನ್‌ನತ್ತ ಹೆಜ್ಜೆ ಇಡುತ್ತಿದ್ದಾಗ ಬರ್ಮಿಂಗ್‌ಹ್ಯಾಮ್ ಸ್ಟೇಡಿಯಂನಲ್ಲಿ ನೆರೆದಿದ್ದ ಇಂಗ್ಲೆಂಡ್ ಕ್ರಿಕೆಟ್ ಅಭಿಮಾನಿಗಳು ಎದ್ದುನಿಂತು ಸ್ಯಾಂಡ್‌ಪೇಪರ್‌ನ್ನು ಪ್ರದರ್ಶಿಸಿ ಚೆಂಡು ವಿರೂಪ ಪ್ರಕರಣವನ್ನು ನೆನಪಿಸಿದರು.

 2018ರ ಮಾರ್ಚ್‌ನಲ್ಲಿ ಚೆಂಡು ವಿರೂಪ ಪ್ರಕರಣಕ್ಕೆ ಸಂಬಂಧಿಸಿ ವಾರ್ನರ್, ಸ್ಟೀವ್ ಸ್ಮಿತ್ ಹಾಗೂ ಕ್ಯಾಮರೂನ್ ಬ್ಯಾಂಕ್ರಾಫ್ಟ್ ಕ್ರಿಕೆಟ್ ಆಸ್ಟ್ರೇಲಿಯದಿಂದ ನಿಷೇಧಕ್ಕೆ ಒಳಗಾಗಿದ್ದರು. ನಿಷೇಧ ಪೂರೈಸಿದ ಬಳಿಕ ಈ ಮೂವರು ಆಟಗಾರರು ಇಂದು ಮೊದಲ ಟೆಸ್ಟ್ ಪಂದ್ಯ ಆಡಿದರು.

 ಕೇಪ್‌ಟೌನ್‌ನಲ್ಲಿ ನಡೆದಿದ್ದ ದಕ್ಷಿಣ ಆಫ್ರಿಕ ವಿರುದ್ಧದ 3ನೇ ಟೆಸ್ಟ್ ಪಂದ್ಯದಲ್ಲಿ ಬ್ಯಾಂಕ್ರಾಫ್ಟ್ ಅವರು ಸ್ಯಾಂಡ್‌ಪೇಪರ್(ಮರಳು ಲೇಪಿತ ಕಾಗದ)ನಿಂದ ಚೆಂಡಿನ ಒಂದು ಭಾಗವನ್ನು ಉಜ್ಜಿ ಚೆಂಡನ್ನು ವಿರೂಪಗೊಳಿಸಲು ಯತ್ನಿಸಿದ್ದರು. ಇದು ಕ್ಯಾಮರಾದಲ್ಲಿ ಸೆರೆಯಾಗಿ ಭಾರೀ ವಿವಾದ ಸೃಷ್ಟಿಯಾಗಿತ್ತು. ಆಗಷ್ಟೇ ಕ್ರಿಕೆಟ್‌ಗೆ ಕಾಲಿಟ್ಟಿದ್ದ ಬ್ಯಾಂಕ್ರಾಫ್ಟ್‌ಗೆ ಹೀಗೆ ಮಾಡಲು ವಾರ್ನರ್ ಹಾಗೂ ಸ್ಮಿತ್ ಪ್ರಚೋದನೆ ನೀಡಿದ್ದಾರೆ ಎನ್ನಲಾಗಿತ್ತು. ಈ ಕಾರಣಕ್ಕೆ ಈ ಇಬ್ಬರು ಆಟಗಾರರು ಒಂದು ವರ್ಷ ನಿಷೇಧ ಎದುರಿಸಿದ್ದರು. ಬ್ಯಾಂಕ್ರಾಫ್ಟ್ 9 ತಿಂಗಳು ನಿಷೇಧಕ್ಕೆ ಒಳಗಾಗಿದ್ದರು. ವಾರ್ನರ್ ಹಾಗೂ ಸ್ಮಿತ್ ಇತ್ತೀಚೆಗೆ ಇಂಗ್ಲೆಂಡ್‌ನಲ್ಲಿ ಕೊನೆಗೊಂಡಿದ್ದ ವಿಶ್ವಕಪ್‌ನಲ್ಲಿ ಆಡುವ ಮೂಲಕ ಅಂತರ್‌ರಾಷ್ಟ್ರೀಯ ಕ್ರಿಕೆಟ್‌ಗೆ ವಾಪಸಾಗಿದ್ದರು. ವಿಶ್ವಕಪ್‌ನ ವೇಳೆಯೂ ಇಂಗ್ಲೆಂಡ್‌ನ ಕ್ರಿಕೆಟ್ ಅಭಿಮಾನಿಗಳು ಸ್ಯಾಂಡ್‌ಪೇಪರ್ ರೀತಿಯ ಬಟ್ಟೆಗಳನ್ನು ಧರಿಸಿಕೊಂಡು ಬಂದು ಇಬ್ಬರು ಆಟಗಾರರನ್ನು ಅಣಕಿಸಿದ್ದರು.

ಸ್ಮಿತ್ ಹಾಗೂ ವಾರ್ನರ್‌ಗೆ ಎಲ್ಲರೂ ಗೌರವ ನೀಡಬೇಕು. ಇಬ್ಬರು ಆಟಗಾರರು ಈಗಾಗಲೇ ತಮ್ಮ ತಪ್ಪಿಗೆ ಬೆಲೆ ತೆತ್ತಿದ್ದಾರೆ ಎಂದು ಆಸ್ಟ್ರೇಲಿಯದ ಕೋಚ್ ಜಸ್ಟಿನ್ ಲ್ಯಾಂಗರ್ ಇಂಗ್ಲೆಂಡ್ ಅಭಿಮಾನಿಗಳನ್ನು ಕೋರಿದ್ದರು. ಆದರೆ, ಇಂಗ್ಲೆಂಡ್ ಅಭಿಮಾನಿಗಳು ಮಾತ್ರ ಈ ಇಬ್ಬರು ಆಟಗಾರರನ್ನು ಗುರಿ ಮಾಡುವುದನ್ನು ಮುಂದುವರಿಸಿದ್ದರು.

ಇಂಗ್ಲೆಂಡ್ ವಿರುದ್ಧದ ವಿಶ್ವಕಪ್‌ನ ಗ್ರೂಪ್ ಪಂದ್ಯದಲ್ಲಿ ವಾರ್ನರ್ 61 ಎಸೆತಗಳಲ್ಲಿ 53 ರನ್ ಗಳಿಸಿದ್ದರು. ಈ ವೇಳೆ ಅವರಿಗೆ ಇಂಗ್ಲೆಂಡ್ ಅಭಿಮಾನಿಗಳು ಅಣಕಿಸಿದ್ದರು. ಆದಾಗ್ಯೂ ಇದನ್ನು ಗಂಭೀರವಾಗಿ ಪರಿಗಣಿಸದ ವಾರ್ನರ್ ಪ್ರೇಕ್ಷಕರತ್ತ ನಗೆ ಬೀರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News