​ ಬೌಲಿಂಗ್ ಕೋಚ್ ಹುದ್ದೆಗೆ ವೆಂಕಟೇಶ್ ಪ್ರಸಾದ್ ಅರ್ಜಿ

Update: 2019-08-01 18:09 GMT

ಮುಂಬೈ, ಆ.1: ಭಾರತದ ಮಾಜಿ ವೇಗದ ಬೌಲರ್ ವೆಂಕಟೇಶ್ ಪ್ರಸಾದ್ ಟೀಮ್ ಇಂಡಿಯಾದ ಬೌಲಿಂಗ್ ಕೋಚ್ ಹುದ್ದೆಗೆ ಅರ್ಜಿ ಸಲ್ಲಿಸಿದ್ದಾರೆ ಎಂದು ವರದಿಯಾಗಿದೆ.

ಕನ್ನಡಿಗ ಪ್ರಸಾದ್ ಭಾರತದ ಪರ 33 ಟೆಸ್ಟ್ ಹಾಗೂ 162 ಏಕದಿನ ಪಂದ್ಯಗಳಲ್ಲಿ ಆಡಿದ್ದಾರೆ. ಮೂರು ವರ್ಷಗಳ ಕಾಲ ಜೂನಿಯರ್ ರಾಷ್ಟ್ರೀಯ ತಂಡದ ಮುಖ್ಯ ಆಯ್ಕೆಗಾರನಾಗಿ ಕಾರ್ಯನಿರ್ವಹಿಸಿದ್ದರು. ಕಳೆದ ವರ್ಷ ಈ ಹುದ್ದೆಯನ್ನು ತ್ಯಜಿಸಿದ್ದರು. 2018ರ ಆವೃತ್ತಿಯ ಐಪಿಎಲ್‌ನಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಕೋಚ್ ಆಗಿದ್ದರು.

ಈ ಹಿಂದೆ 2007ರಿಂದ 2009ರ ತನಕ ಭಾರತೀಯ ಕ್ರಿಕೆಟ್ ತಂಡದಲ್ಲಿ ಬೌಲಿಂಗ್ ಕೋಚ್ ಆಗಿ ಕಾರ್ಯನಿರ್ವಹಿಸಿದ್ದ ಪ್ರಸಾದ್ ಚೆನ್ನೈ ಸೂಪರ್ ಕಿಂಗ್ಸ್ (ನಾಲ್ಕು ವರ್ಷಗಳು) ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು(ಎರಡು ವರ್ಷಗಳು)ಫ್ರಾಂಚೈಸಿಗಳಲ್ಲಿ ಬೌಲಿಂಗ್ ಕೋಚ್ ಆಗಿದ್ದರು.

ಟೀಮ್ ಇಂಡಿಯಾದಲ್ಲಿ ಮೊದಲ ಬಾರಿ ಬೌಲಿಂಗ್ ಕೋಚ್ ಆಗಿದ್ದ ಅವಧಿಯಲ್ಲಿ 2007ರಲ್ಲಿ ಭಾರತ ತಂಡ ಇಂಗ್ಲೆಂಡ್ ವಿರುದ್ಧ 1986ರ ಬಳಿಕ ಮೊದಲ ಬಾರಿ ಟೆಸ್ಟ್ ಸರಣಿಯನ್ನು ಜಯಿಸಿತ್ತು. 47ರ ಹರೆಯದ ಪ್ರಸಾದ್ ಕೋಚ್ ಹುದ್ದೆಗೆ ಅರ್ಜಿ ಸಲ್ಲಿಸಿರುವುದನ್ನು ದೃಢಪಡಿಸಿದ್ದಾರೆ. ಆದರೆ, ಹೆಚ್ಚಿನ ವಿವರ ನೀಡಲು ನಿರಾಕರಿಸಿದರು. ಪ್ರಸ್ತುತ ಭಾರತದ ಮಾಜಿ ವೇಗದ ಬೌಲರ್ ಭರತ್ ಅರುಣ್ ಭಾರತ ತಂಡದ ಬೌಲಿಂಗ್ ಕೋಚ್ ಆಗಿದ್ದಾರೆ.

ಬಿಸಿಸಿಐ ಇತ್ತೀಚೆಗೆ ಟೀಮ್ ಇಂಡಿಯಾದ ಕೋಚ್ ಹುದ್ದೆಗಳಿಗೆ ಜಾಹೀರಾತು ಮೂಲಕ ಅರ್ಜಿ ಆಹ್ವಾನಿಸಿತ್ತು. ಕ್ರಿಕೆಟ್ ಮಂಡಳಿಯು ಆಗಸ್ಟ್ 13ರಿಂದ ಅರ್ಜಿ ಪರಿಶೀಲನೆ ಹಾಗೂ ಸಂದರ್ಶನ ಪ್ರಕ್ರಿಯೆಯನ್ನು ನಡೆಸಲಿದೆ. ಹೊಸ ನಿಯಮದ ಪ್ರಕಾರ ಸಹಾಯಕ ಸಿಬ್ಬಂದಿಯ ಸಂದರ್ಶನ ಪ್ರಕ್ರಿಯೆಯನ್ನು ಆಯ್ಕೆ ಸಮಿತಿಯ ಮುಖ್ಯಸ್ಥ ಎಂಎಸ್‌ಕೆ ಪ್ರಸಾದ್ ನೇತೃತ್ವದ ರಾಷ್ಟ್ರೀಯ ಆಯ್ಕೆ ಸಮಿತಿಯು ನಡೆಸಬೇಕಾಗಿದೆ. ಸಹಾಯಕ ಸಿಬ್ಬಂದಿಯ ಸಂದರ್ಶನವನ್ನು ಆಯ್ಕೆ ಸಮಿತಿ ಅಥವಾ ಕಪಿಲ್‌ದೇವ್ ನೇತೃತ್ವದ ಕ್ರಿಕೆಟ್ ಸಲಹಾ ಮಂಡಳಿ(ಸಿಎಸಿ)ನಡೆಯುವ ಕುರಿತು ಸ್ಪಷ್ಟತೆಯಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News