ಜಾರ್ಜ್ ಫೆರ್ನಾಂಡಿಸ್ ನೆನಪಿಗೆ ಬರಲಿಲ್ಲವೇ?

Update: 2019-08-01 18:24 GMT

ಮಾನ್ಯರೇ,

1999ರಲ್ಲಿ ಅಟಲ್ ಬಿಹಾರಿ ವಾಜಪೇಯಿಯವರು ಸರಕಾರವು ಅವರ ಮಂತ್ರಿಮಂಡಲದಲ್ಲಿ ರಕ್ಷಣಾ ಮಂತ್ರಿ ಜಾರ್ಜ್ ಫೆರ್ನಾಂಡಿಸ್ ನೇತೃತ್ವದಲ್ಲಿ ಪಾಕಿಸ್ತಾನದ ವಿರುದ್ಧ ಕಾರ್ಗಿಲ್‌ನಲ್ಲಿ ಯುದ್ಧ ಮಾಡಿ ಭಾರತವು ಗೆದ್ದಿದ್ದರ 20ನೇ ವರ್ಷದ ಸಂಭ್ರಮವನ್ನು ವಿಶೇಷವಾಗಿ ವಿವಿಧ ಮಾಧ್ಯಮ ಚಾನೆಲ್‌ಗಳು ಭಾರತದ ಜನತೆಗೆ ಸಡಗರದಿಂದ ಅನುಭವಿಸುವಂತೆ ಮಾಡಿದವು. ಇದು ಔಚಿತ್ಯಪೂರ್ಣವೂ ಅಭಿನಂದನೀಯವೂ ಆದ ಸಂಗತಿ.

ಇದೇ ಸಂಭ್ರಮವನ್ನು ಶನಿವಾರ ದಿಲ್ಲಿಯ ಇಂದಿರಾ ಗಾಂಧಿ ಸ್ಟೇಡಿಯಂನಲ್ಲಿ ಪ್ರದರ್ಶಿಸಿದ್ದನ್ನು ಸಿಎನ್‌ಎನ್ ಸುದ್ದಿ ಮಾಧ್ಯಮ ರಾತ್ರಿ 7ರಿಂದ ನೇರ ಪ್ರಸಾರ ಮಾಡಿತ್ತು. ಪ್ರಧಾನಿ ನರೇಂದ್ರ ಮೋದಿ ಸಮಾರಂಭದ ಉದ್ದಕ್ಕೂ ಉಪಸ್ಥಿತರಿದ್ದರಲ್ಲದೆ, ಸಾಂದರ್ಭಿಕವಾದ ಸುಮಾರು 20 ನಿಮಿಷ ತಮ್ಮ ಭಾಷಣವನ್ನು ವೇದಿಕೆಯಲ್ಲಿ ಮಾಡಿದರು. ಅಂದು ಯುದ್ಧದಲ್ಲಿ ಹುತಾತ್ಮರಾಗಿದ್ದ ಸೈನಿಕರ ಮಾತೆಯರಿಗೆ ತಮ್ಮ ನಮನ ಸಲ್ಲಿಸಿದರು. ಕಾರ್ಗಿಲ್ ಯುದ್ಧದ ವಿಜಯೋತ್ಸವದ ನೆನಪಿಗಾಗಿ ರಕ್ಷಣಾ ಖಾತೆಗೆ ಮತ್ತು ಯೋಧರು ಹಾಗೂ ಯುದ್ಧದಲ್ಲಿ ಮಡಿದ ಹುತಾತ್ಮರ ಮಕ್ಕಳಿಗೆ ಸರಕಾರದಿಂದ ನೀಡುವ ವಿಶೇಷ ಸವಲತ್ತುಗಳನ್ನು ಕೂಡ ಅವರು ಘೋಷಿಸಿದರು.

 ತಾನು ಒಮ್ಮೆ ಕಾರ್ಗಿಲ್‌ಗೆ ಭೇಟಿ ಮಾಡಿದ್ದನ್ನು ಸ್ಮರಿಸಿಕೊಂಡ ‘‘ಇದು ನನ್ನ ತೀರ್ಥಯಾತ್ರೆ’’ ಎಂದು ಹೇಳಿಕೊಂಡರು. ಆದರೆ ಆ ಯುದ್ಧ ನಡೆಯುತ್ತಿರುವಾಗ ರಕ್ಷಣಾ ಮಂತ್ರಿಯಾಗಿದ್ದ ಜಾರ್ಜ್ ಫೆರ್ನಾಂಡಿಸ್ ಅವರ ನೆನಪು ಪ್ರಧಾನಿ ಮಂತ್ರಿಗಳಿಗೆ ಆಗದೇ ಇರುವುದು ಆಶ್ಚರ್ಯವೂ ಶೋಚನೀಯವೂ ಹೌದು. ಜಾರ್ಜ್ ಯುದ್ಧ ನಡೆಯುತ್ತಿರುವಾಗಲೇ ರಣರಂಗಕ್ಕೆ ಹಲವು ಬಾರಿ ಸ್ವತಃ ಹೋಗಿ ಸೈನಿಕರಲ್ಲಿ ಧೈರ್ಯ ತುಂಬಿದ್ದರು ಕೂಡ.

ಜಾರ್ಜ್ ನಿಧನರಾಗಿ ಆರು ತಿಂಗಳು ಕಳೆಯುವಷ್ಟರಲ್ಲಿ ಪ್ರಧಾನಮಂತ್ರಿಗಳು ಅವರನ್ನು ಮರೆತುಬಿಟ್ಟರೋ ಹೇಗೆ? ಭಾಷಣದ ಕೊನೆಗೆ ಈಗಿನ ಭಾಜಪ ಜಾಯಮಾನದಂತೆ ‘‘ಭಾರತ್ ಮಾತಾಕೀ ಜೈ’’ ಎಂಬ ಘೋಷಣೆಯನ್ನು ತಾನು ಮಾಡಿ ಅದಕ್ಕೆ ಸಭಿಕರ ಮರು ಘೋಷಣೆಯನ್ನು ಸ್ವೀಕರಿಸಿದರು. ಆದರೆ ಮೊದಲ ಪ್ರಧಾನಮಂತ್ರಿ ಪಂಡಿತ್ ಜವಾಹರ್ ಲಾಲ್ ನೆಹರೂ ಘೋಷಿಸಿ ಇದುವರೆಗೂ ಪ್ರಚಲಿತವಿರುವ ‘‘ಜೈ ಹಿಂದ್’’, ಅಂತೆಯೇ ನೆಹರೂ ಉತ್ತರಾಧಿಕಾರಿ ಲಾಲ್ ಬಹದ್ದೂರ್ ಶಾಸ್ತ್ರಿ ಅಂದು ಮೊಳಗಿಸಿದ್ದ ‘‘ಜೈ ಜವಾನ್ ಜೈ ಕಿಸಾನ್’’ ಇವುಗಳ ನೆನಪು ಈ ಸಂದರ್ಭದಲ್ಲಿ ಮಾಡುವುದು ಔಚಿತ್ಯವಾಗಿತ್ತಲ್ಲವೇ? ಇಂತಹ ಮರೆಗುಳಿ ಏನನ್ನು ಸೂಚಿಸುತ್ತದೆ?

Writer - -ಅಮ್ಮೆಂಬಳ ಆನಂದ, ಮಣಿಪಾಲ

contributor

Editor - -ಅಮ್ಮೆಂಬಳ ಆನಂದ, ಮಣಿಪಾಲ

contributor

Similar News