ಕಾಶ್ಮೀರ ಭದ್ರತಾ ಪರಿಸ್ಥಿತಿ: ಕೇಂದ್ರ ಸ್ಪಷ್ಟನೆ ನೀಡಲಿ; ಒಮರ್ ಆಗ್ರಹ

Update: 2019-08-03 17:25 GMT

ಶ್ರೀನಗರ, ಆ.3: ಕಾಶ್ಮೀರ ಕಣಿವೆಯಲ್ಲಿ 38 ಸಾವಿರದಷ್ಟು ಹೆಚ್ಚುವರಿ ಭದ್ರತಾ ಪಡೆಗಳನ್ನು ಕೇಂದ್ರ ಸರಕಾರ ನಿಯೋಜಿಸಿರುವ ಹಿನ್ನೆಲೆಯಲ್ಲಿ ನ್ಯಾಶನಲ್ ಕಾನ್ಫರೆನ್ಸ್ ನಾಯಕ ಹಾಗೂ ಜಮ್ಮುಕಾಶ್ಮೀರದ ಮಾಜಿ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಅವರು ಶನಿವಾರ ರಾಜ್ಯಪಾಲ ಸತ್ಯಪಾಲ ಮಲಿಕ್ ಅವರನ್ನು ಇಲ್ಲಿನ ರಾಜಭವನದಲ್ಲಿ ಭೇಟಿಯಾಗಿ ರಾಜ್ಯದಲ್ಲಿ ನೆಲೆಸಿರುವ ಪ್ರಸಕ್ತ ಪರಿಸ್ಥಿತಿಯ ಬಗ್ಗೆ ಚರ್ಚಿಸಿದ್ದಾರೆ.

ಅಮರನಾಥ ಯಾತ್ರಿಕರು ಹಾಗೂ ಇತರ ಪ್ರವಾಸಿಗರು ಕಾಶ್ಮೀರ ಕಣಿವೆಯಲ್ಲಿ ತಮ್ಮ ವಾಸ್ತವ್ಯವನ್ನು ಮೊಟಕುಗೊಳಿಸಿ ತಕ್ಷಣವೇ ನಿರ್ಗ ಮಿಸಬೇಕೆಂದು ರಾಜ್ಯ ಸರಕಾರವು ಸೂಚನೆ ನೀಡಿದ ಮರುದಿನವೇ ಒಮರ್ ಅಬ್ದುಲ್ಲಾ ರಾಜ್ಯಪಾಲರನ್ನು ಭೇಟಿಯಾಗಿದ್ದಾರೆ.

ಕಾಶ್ಮೀರ ಕಣಿವೆಯಲ್ಲಿ ಭಯೋತ್ಪಾದಕ ದಾಳಿ ನಡೆಯುವ ಸಾಧ್ಯತೆಯ ಬಗ್ಗೆ ಎಚ್ಚರಿಕೆ ನೀಡಿದ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ಈ ಆದೇಶ ಹೊರಡಿಸಿತ್ತು. ಅಬ್ದುಲ್ಲಾ ಅವರು ರಾಜ್ಯಪಾಲರನ್ನು ಭೇಟಿಯಾದ ಕೆಲವೇ ತಾಸುಗಳ ಬಳಿಕ ಜಮ್ಮುಕಾಶ್ಮೀರ ಸರಕಾರವು ಕಿಶ್ವಾರ ಜಿಲ್ಲೆಯಲ್ಲಿ ನಡೆಯಲಿದ್ದ ‘ಮಚೈಲ್ ಯಾತ್ರಾ’ವನ್ನು ಭದ್ರತಾ ಕಾರಣಗಳಿಗಾಗಿ ರದ್ದುಪಡಿಸಿದೆ.

ರಾಜ್ಯಪಾಲರನ್ನು ಭೇಟಿಯಾದ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಉಮರ್ ಅಬ್ದುಲ್ಲಾ ಅವರು ‘‘ಜಮ್ಮುಕಾಶ್ಮೀರದ ಪ್ರಸಕ್ತ ಪರಿಸ್ಥಿತಿಯ ಬಗ್ಗೆ ತಿಳಿಯಲು ನಾವು ಬಯಸುತ್ತಿದ್ದೇವೆ’’ ಎಂದರು. ‘‘ನಾವು ಸತ್ಯವನ್ನು ಅರಿತುಕೊಳ್ಳಲು ಯತ್ನಿಸಿದರೂ, ನಮಗೆ ಯಾವುದೇ ಉತ್ತರ ಲಭಿಸುತ್ತಿಲ್ಲ. ನಾವು ಅಧಿಕಾರಿಗಳನ್ನು ಪ್ರಶ್ನಿಸಿದಾಗ, ಏನೋ ನಡೆಯುತ್ತಿದೆ ಎಂದಷ್ಟೇ ಉತ್ತರಿಸುತ್ತಾರೆ. ಆದರೆ ಯಾರಿಗೂ ಏನಾಗುತ್ತಿದೆಯೆಂಬುದೇ ತಿಳಿದಿಲ್ಲ’’ ಎಂದು ಅಬ್ದುಲ್ಲಾ ಕಳವಳ ವ್ಯಕ್ತಪಡಿಸಿದರು.

ಜಮ್ಮುಕಾಶ್ಮೀರಕ್ಕೆ ವಿಶೇಷ ಸ್ಥಾನಮಾನವನ್ನು ಒದಗಿಸುವ ಸಂವಿಧಾನದ 35ಎ ಹಾಗೂ 370 ವಿಧಿಗಳನ್ನು ರದ್ದುಪಡಿಸುವ ಹಾಗೂ ರಾಜ್ಯವನ್ನು ಮೂರು ಭಾಗಗಳಾಗಿ ವಿಭಜಿಸುವ ಹಾಗೂ ಕ್ಷೇತ್ರಗಳ ಪುನರ್‌ವಿಂಗಡನೆ ಕುರಿತಾಗಿ ಹರಿದಾಡುತ್ತಿರುವ ವದಂತಿಗಳ ಬಗ್ಗೆಯೂ ತಾವು ರಾಜ್ಯಪಾಲರಿಂದ ಮಾಹಿತಿ ಕೇಳಿದ್ದೆವು. ಅದಕ್ಕೆ ಅವರು ಅಂತಹ ಯಾವುದೇ ಸಂಗತಿ ನಡೆಯಲಾರದುಎಂದು ಸ್ಪಷ್ಟಪಡಿಸಿದ್ದಾರೆ’’ ಎಂದು ಅಬ್ದುಲ್ಲಾ ತಿಳಿಸಿದರು.

ಸಂವಿಧಾನದ 35ಎ ವಿಧಿಯು, ಜಮ್ಮುಕಾಶ್ಮೀರ ರಾಜ್ಯಕ್ಕೆ ಉದ್ಯೋಗ, ಆಸ್ತಿ ಒಡೆತನ ಸೇರಿದಂತೆ ವಿವಿಧ ವಿಷಯಗಳಲ್ಲಿ ವಿಶೇಷ ಹಕ್ಕುಗಳು ಹಾಗೂ ಸೌಲಭ್ಯಗಳನ್ನು ಒದಗಿಸಿಕೊಟ್ಟಿದೆ ಮತ್ತು ಈ ರಾಜ್ಯಕ್ಕೆ ಸಂಬಂಧಿಸಿದಂತೆ ಕಾನೂನುಗಳನ್ನು ರೂಪಿಸುವ ಸಂಸತ್‌ನ ಅಧಿಕಾರ ವನ್ನು ಸೀಮಿತಗೊಳಿಸಿದೆ.

‘‘ಸೋಮವಾರದಂದು ಸಂಸತ್ ಕಲಾಪ ಆರಂಭಗೊಂಡಾಗ, ಕೇಂದ್ರ ಸರಕಾರವು ಅಮರನಾಥ ಯಾತ್ರೆಯನ್ನು ಕೊನೆಗೊಳಿಸುವ ಹಾಗೂ ಪ್ರವಾಸಿಗರನ್ನು ರಾಜ್ಯದಿಂದ ತೆರವುಗೊಳಿಸುವ ಅಗತ್ಯವಾದರೂ ಏನು ಎಂಬ ಬಗ್ಗೆ ವಿವರಣೆ ನೀಡಬೇಕಾಗಿದೆ’’ ಎಂದು ಒಮರ್ ಅಬ್ದುಲ್ಲಾ ಆಗ್ರಹಿಸಿದರು.

‘‘ರಾಜ್ಯದ ಜನತೆ ಭಯಪಡಬೇಕಾದ ಅಗತ್ಯವಿಲ್ಲವೆಂಬ ಬಗ್ಗೆ ನಾವು ಸಂಸತ್‌ನಿಂದ ಸ್ಪಷ್ಟನೆಯನ್ನು ಕೇಳಲು ಬಯಸುತ್ತಿದ್ದೇವೆ’’ ಎಂದು ಅಬ್ದುಲ್ಲಾ ಹೇಳಿದರು.

ಜಮ್ಮುಕಾಶ್ಮೀರ ವಿಷಯದಲ್ಲಿ ರಾಜ್ಯಪಾಲರ ಮಾತೇ ಅಂತಿಮವಲ್ಲ. ಜಮ್ಮುಕಾಶ್ಮೀರದ ಕುರಿತಾದ ಅಂತಿಮ ಮಾತು ಭಾರತ ಸರಕಾರದಿಂದಲೇ ಬರಬೇಕಾಗಿದೆ’ ಎಂದು ಒಮರ್ ಅಬ್ದುಲ್ಲಾ ಹೇಳಿದ್ದಾರೆಂದು ಎಎನ್‌ಐ ಸುದ್ದಿಸಂಸ್ಥೆ ವರದಿ ಮಾಡಿದೆ.

ಭದ್ರತಾ ಪರಿಸ್ಥಿತಿಯ ಕಾರಣ ಹೆಚ್ಚುವರಿ ಪಡೆಗಳ ನಿಯೋಜನೆ

ರಾಜ್ಯಪಾಲ ಸತ್ಯಪಾಲ್ ಮಲಿಕ್ ಶುಕ್ರವಾರ ಸಂಜೆ ತನ್ನನ್ನು ಭೇಟಿಯಾದ ರಾಜಕೀಯ ಮುಖಂಡರ ನಿಯೋಗಕ್ಕೆ, ಶಾಂತಿಯನ್ನು ಕಾಯ್ದುಕೊಳ್ಳುವಂತೆ ಹಾಗೂ ರಾಜ್ಯದಲ್ಲಿ ಹರಿದಾಡುತ್ತಿರುವ ವದಂತಿಗಳಿಗೆ ಕಿವಿಗೊಡದಂತೆ ಮನವಿ ಆಡಿದ್ದಾರೆ. ಇದಕ್ಕೂ ಮುನ್ನ ಕೇಂದ್ರ ಗೃಹ ಸಚಿವಾಲಯವು, ಭದ್ರತಾ ಪರಿಸ್ಥಿತಿಯನ್ನು ಆಧರಿಸಿ ಕಾಶ್ಮೀರ ಕಣಿವೆಯಲ್ಲಿ ಹೆಚ್ಚುವರಿ ಸೇನಾಪಡೆಗಳನ್ನು ನಿಯೋಜಿಸಲಾಗಿದೆಯೆಂದು ತಿಳಿಸಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News