×
Ad

ವಿರಾಟ್ ಪಡೆಗೆ ಕ್ಲೀನ್‌ ಸ್ವೀಪ್ ಕನಸು

Update: 2019-08-05 23:16 IST

ಗಯಾನ, ಆ.5: ವೆಸ್ಟ್‌ಇಂಡೀಸ್ ವಿರುದ್ಧದ ಟ್ವೆಂಟಿ-20 ಸರಣಿಯ ಮೂರನೇ ಹಾಗೂ ಅಂತಿಮ ಪಂದ್ಯ ಗಯಾನದ ಪ್ರಾವಿಡೆನ್ಸ್ ಸ್ಟೇಡಿಯಂನಲ್ಲಿ ಮಂಗಳವಾರ ನಡೆಯಲಿದ್ದು, ಸರಣಿಯನ್ನು 2-0 ಅಂತರದಲ್ಲಿ ವಶಪಡಿಸಿಕೊಂಡಿರುವ ಭಾರತ ಕ್ಲೀನ್ ಸ್ವೀಪ್ ಸಾಧಿಸುವ ಯೋಜನೆ ಹಾಕಿಕೊಂಡಿದೆ.

  ಅಮೆರಿಕದ ಫ್ಲೋರಿಡಾದಲ್ಲಿ ನಡೆದ ಸರಣಿಯ ಮೊದಲೆರಡು ಪಂದ್ಯಗಳಲ್ಲಿ ಭಾರತ ಜಯ ಗಳಿಸಿತ್ತು. ಮೊದಲ ಪಂದ್ಯದಲ್ಲಿ 4 ವಿಕೆಟ್‌ಗಳ ಜಯ ಗಳಿಸಿತ್ತು. ಎರಡನೇ ಪಂದ್ಯಕ್ಕೆ ಮಳೆ ಅಡ್ಡಿಪಡಿಸಿದ್ದರೂ ಭಾರತ ಡಕ್‌ವರ್ಥ್ ಲೂಯಿಸ್ ನಿಯಮದಂತೆ 22 ರನ್‌ಗಳ ಅಂತರದಲ್ಲಿ ಜಯ ಸಾಧಿಸಿದೆ. ಆರಂಭಿಕ ಬ್ಯಾಟ್ಸ್‌ಮನ್ ರೋಹಿತ್ ಶಮಾರ್  ಅರ್ಧಶತಕ(67) ನೆರವಿನಲ್ಲಿ ಭಾರತ ನಿಗದಿತ 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟದಲ್ಲಿ 167 ರನ್ ಗಳಿಸಿತ್ತು. ಗೆಲುವಿಗೆ 168 ರನ್‌ಗಳ ಸವಾಲನ್ನು ಪಡೆದ ವೆಸ್ಟ್‌ಇಂಡೀಸ್ 15.3 ಓವರ್‌ಗಳಲ್ಲಿ 4 ವಿಕೆಟ್ ನಷ್ಟದಲ್ಲಿ 98 ರನ್ ಗಳಿಸುವಷ್ಟರಲ್ಲಿ ಪ್ರತಿಕೂಲ ಹವಾಮಾನದಿಂದಾಗಿ ಆಟ ಸ್ಥಗಿತಗೊಂಡಿತು. ಈ ಹಂತದಲ್ಲಿ ವಿಂಡೀಸ್ ಜಯ ಗಳಿಸಲು 27 ಎಸೆತಗಳಲ್ಲಿ 70 ರನ್ ಗಳಿಸಬೇಕಾದ ಒತ್ತಡಕ್ಕೆ ಸಿಲುಕಿತ್ತು.

ಸುನೀಲ್ ನರೇನ್(4), ಎವಿನ್ ಲೆವಿಸ್(0), ನಿಕೋಲಸ್ ಪೂರನ್(19), ರೊವ್‌ಮ್ಯಾನ್ ಪೊವೆಲ್(54) ಔಟಾಗಿದ್ದರು. ಕೀರನ್ ಪೊಲಾರ್ಡ್ ಔಟಾಗದೆ 8ರನ್ ಮತ್ತು ಶಿಮ್ರಾನ್ ಹೆಟ್ಮಾಯರ್ 6 ರನ್ ಗಳಿಸಿ ಔಟಾಗದೆ ಕ್ರೀಸ್‌ನಲ್ಲಿದ್ದರು. ಭಾರತದ ಕೃನಾಲ್ ಪಾಂಡ್ಯ 23ಕ್ಕೆ 2, ವಾಶಿಂಗ್ಟನ್ ಸುಂದರ್ ಮತ್ತು ಭುವನೇಶ್ವರ್ ಕುಮಾರ್ ತಲಾ 1 ವಿಕೆಟ್ ಪಡೆದು ವಿಂಡೀಸ್‌ಗೆ ಆಘಾತ ನೀಡಿದ್ದರು. ಬಳಿಕ ಆಟ ನಡೆಯಲಿಲ್ಲ. ಭಾರತ ಗೆಲುವಿನ ನಗೆ ಬೀರಿತು. ಆಲ್‌ರೌಂಡರ್ ಕೃನಾಲ್ ಪಾಂಡ್ಯ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದರು. ಮೂರನೇ ಪಂದ್ಯ ವೆಸ್ಟ್‌ಇಂಡೀಸ್‌ಗೆ ತವರಿನಲ್ಲಿ ಎದುರಾಗಲಿರುವ ಮೊದಲ ಸವಾಲು. ಭಾರತದ ಕ್ಲೀನ್‌ಸ್ವೀಪ್ ಕನಸನ್ನು ಭಗ್ನಗೊಳಿಸಲು ವಿಂಡೀಸ್ ಈ ಪಂದ್ಯದಲ್ಲಿ ಜಯ ಗಳಿಸಬೇಕಾಗಿದೆ. ಆದರೆ ವಿಂಡೀಸ್‌ಗೆ ಗೆಲುವು ಯೋಚಿಸಿದಷ್ಟು ಸುಲಭವಿಲ್ಲ. ಭಾರತ ಹಿಂದಿನ ಪಂದ್ಯದಲ್ಲಿ ಕಂಡು ಬಂದಿರುವ ದೌರ್ಬಲ್ಯವನ್ನು ಸರಿಪಡಿಸಿಕೊಂಡು ಅಂತಿಮ ಪಂದ್ಯಕ್ಕೆ ಅಣಿಯಾಗಿದೆ.

 ಬ್ಯಾಟಿಂಗ್ ಸರದಿಯಲ್ಲಿ ಹೆಚ್ಚು ಬದಲಾವಣೆ ಇಲ್ಲದಿದ್ದರೂ ಬೌಲಿಂಗ್‌ನಲ್ಲಿ ಕೆಲವು ಬದಲಾವಣೆಗೆ ನಾಯಕ ಕೊಹ್ಲಿ ಯೋಚಿಸಿದ್ದಾರೆ. ಲೋಕೇಶ್ ರಾಹುಲ್ ಅಂತಿಮ ಹನ್ನೊಂದರ ಬಳಗದಲ್ಲಿ ಸೇರ್ಪಡೆಯಾಗಲಿದ್ದಾರೆ. ದಿಲ್ಲಿಯ ಯುವ ದಾಂಡಿಗ ರಿಷಭ್ ಪಂತ್ ಮೊದಲ ಪಂದ್ಯದಲ್ಲಿ 4 ರನ್ ಮತ್ತು ಎರಡನೇ ಪಂದ್ಯದಲ್ಲಿ ಖಾತೆ ತೆರೆಯದೆ ಶೂನ್ಯಕ್ಕೆ ನಿರ್ಗಮಿಸಿದ್ದರು. ಈ ಕಾರಣದಿಂದಾಗಿ ಅಂತಿಮ ಪಂದ್ಯದಲ್ಲಿ ಅವರಿಗೆ ಅವಕಾಶ ಸಿಗುವ ಸಾಧ್ಯತೆ ಬಗ್ಗೆ ಕುತೂಹಲ ಕೆರಳಿಸಿದೆ. ನಾಯಕ ವಿರಾಟ್ ಕೊಹ್ಲಿ ಅವರು ಪಂತ್ ಪರ ಇದ್ದಾರೆ.

  ರೋಹಿತ್ ಶರ್ಮಾ ಮತ್ತು ಶಿಖರ್ ಧವನ್ ಇವರಲ್ಲಿ ಒಬ್ಬರಿಗೆ ವಿಶ್ರಾಂತಿ ನೀಡುವುದು ಖಚಿತ. ಶಿಖರ್ ಧವನ್ ವಿಶ್ವಕಪ್‌ನಲ್ಲಿ ಗಾಯಗೊಂಡು ಹೊರಗುಳಿದ ಬಳಿಕ ಮತ್ತೆ ತಂಡಕ್ಕೆ ವಾಪಸಾಗಿದ್ದರೂ, ಅವರಿಂದ ಗಮನಾರ್ಹ ಪ್ರದರ್ಶನ ಕಂಡು ಬರಲಿಲ್ಲ. ಬೌಲಿಂಗ್ ವಿಭಾಗದಲ್ಲಿ ನವ್‌ದೀಪ್ ಸೈನಿ ಬದಲಿಗೆ ರಾಹುಲ್ ಚಹಾರ್ ಅವಕಾಶ ಪಡೆಯುವ ಸಾಧ್ಯತೆ ಇದೆ. ರಾಹುಲ್ ಚಹಾರ್ ಅವರು ದೀಪಕ್ ಚಹಾರ್‌ರ ಸೋದರ ಸಂಬಂಧಿ. ಆಲ್‌ರೌಂಡರ್ ರವೀಂದ್ರ ಜಡೇಜಗೆ ವಿಶ್ರಾಂತಿ ನೀಡುವ ನಿರೀಕ್ಷೆ ಇದೆ.

ಭಾರತ 

►ವಿರಾಟ್ ಕೊಹ್ಲಿ(ನಾಯಕ), ರೋಹಿತ್ ಶರ್ಮಾ, ಶಿಖರ್ ಧವನ್, ಲೋಕೇಶ್ ರಾಹುಲ್, ಶ್ರೇಯಸ್ ಅಯ್ಯರ್, ಮನೀಷ್ ಪಾಂಡೆ, ರಿಷಭ್ ಪಂತ್, ಕೃನಾಲ್ ಪಾಂಡ್ಯ, ರವೀಂದ್ರ ಜಡೇಜ, ವಾಶಿಂಗ್ಟನ್ ಸುಂದರ್, ರಾಹುಲ್ ಚಹಾರ್, ಭುವನೇಶ್ವರ್ ಕುಮಾರ್, ಖಲೀಲ್ ಅಹ್ಮದ್, ದೀಪಕ್ ಚಹಾರ್,ನವ್‌ದೀಪ್ ಸೈನಿ.

ವೆಸ್ಟ್‌ಇಂಡೀಸ್

►ಕಾರ್ಲೊಸ್ ಬ್ರಾಥ್‌ವೇಟ್(ನಾಯಕ), ಜಾನ್ ಕ್ಯಾಂಪ್‌ಬೆಲ್, ಎವಿನ್ ಲೆವಿಸ್, ಶಿಮ್ರಾನ್ ಹೆಟ್ಮೆಯರ್, ನಿಕೊಲಸ್ ಪೂರನ್, ಕೀರನ್ ಪೊಲಾರ್ಡ್, ರೊವ್‌ಮ್ಯಾನ್ ಪೊವೆಲ್, ಕೀಮೊ ಪಾಲ್, ಸುನೀಲ್ ನರೇನ್, ಶೆಲ್ಡಾನ್ ಕಾಟ್ರೊಲ್, ಒಶಾನೆ ಥಾಮಸ್, ಆಂಥೊನಿ ಬ್ರಾಂಬ್ಲೇ , ಜೇಸನ್ ಮುಹಮ್ಮದ್, ಕ್ಯಾರಿ ಪೆರ್ರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News