×
Ad

ಸಾತ್ವಿಕ್‌ರಾಜ್-ಚಿರಾಗ್‌ಗೆ ಭಡ್ತಿ

Update: 2019-08-06 23:00 IST

ಹೊಸದಿಲ್ಲಿ, ಆ.6: ಭಾರತದ ಪುರುಷರ ಡಬಲ್ಸ್ ಜೋಡಿ ಸಾತ್ವಿಕ್‌ಸಾಯಿರಾಜ್ ರಾನಿಕ್‌ರೆಡ್ಡಿ ಹಾಗೂ ಚಿರಾಗ್ ಶೆಟ್ಟಿ ಮಂಗಳವಾರ ಬಿಡುಗಡೆಯಾದ ವಿಶ್ವ ಬ್ಯಾಡ್ಮಿಂಟನ್ ರ‍್ಯಾಂಕಿಂಗ್ನಲ್ಲಿ ಏಳು ಸ್ಥಾನ ಭಡ್ತಿ ಪಡೆದು ಅಗ್ರ-10ರಲ್ಲಿ ಸ್ಥಾನ ಪಡೆದಿದ್ದಾರೆ.

ಕಳೆದ ವಾರ ಥಾಯ್ಲೆಂಡ್ ಓಪನ್‌ನಲ್ಲಿ ಐತಿಹಾಸಿಕ ಗೆಲುವು ಸಾಧಿಸಿರುವ ಈ ಜೋಡಿ 9ನೇ ರ‍್ಯಾಂಕಿಂಗೆ ಲಗ್ಗೆ ಇಟ್ಟಿದೆ. ರಾನಿಕ್ ರೆಡ್ಡಿ ಹಾಗೂ ಚಿರಾಗ್ ಬಿಡಬ್ಲುಎಫ್ ಸೂಪರ್ 500 ಟೂರ್ನಮೆಂಟ್‌ನಲ್ಲಿ ಚಾಂಪಿಯನ್ ಆಗಿರುವ ಭಾರತದ ಮೊದಲ ಪುರುಷರ ಡಬಲ್ಸ್ ಜೋಡಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿ ಇತಿಹಾಸ ನಿರ್ಮಿಸಿದ್ದರು.

 ರಾನಿಕ್‌ರೆಡ್ಡಿ ಹಾಗೂ ಚಿರಾಗ್ ರವಿವಾರ ನಡೆದ ಥಾಯ್ಲೆಂಡ್ ಓಪನ್ ಫೈನಲ್ ಪಂದ್ಯದಲ್ಲಿ ಚೀನಾದ ಲಿ ಜುನ್ ಹುಯ್ ಹಾಗೂ ಲಿಯು ಯು ಚೆನ್‌ರನ್ನು 21-19, 18-21, 21-18 ಗೇಮ್‌ಗಳ ಅಂತರದಿಂದ ಮಣಿಸಿದ್ದರು.

ಭಾರತದ ಇನ್ನೋರ್ವ ಡಬಲ್ಸ್ ಜೋಡಿ ಮನು ಅತ್ರಿ ಹಾಗೂ ಬಿ.ಸುಮೀತ್ ರೆಡ್ಡಿ 25ನೇ ಸ್ಥಾನ ಕಾಯ್ದುಕೊಂಡಿದ್ದಾರೆ.

 ಭಾರತದ ಪುರುಷರ ಸಿಂಗಲ್ಸ್‌ನಲ್ಲಿ ಪ್ರಮುಖ ಬದಲಾವಣೆಯಾಗಿಲ್ಲ. ಭಾರತೀಯ ಶಟ್ಲರ್‌ಗಳಾದ ಕಿಡಂಬಿ ಶ್ರೀಕಾಂತ್(10ನೇ), ಸಮೀರ್ ವರ್ಮಾ(13),ಬಿ.ಸಾಯಿ ಪ್ರಣೀತ್(19), ಎಚ್.ಎಸ್. ಪ್ರಣಯ್(31) ಹಾಗೂ ಸೌರವ್ ವರ್ಮಾ(44)ತಮ್ಮ ಸ್ಥಾನವನ್ನು ಉಳಿಸಿಕೊಂಡಿದ್ದಾರೆ.

 ಪಾರುಪಲ್ಲಿ ಕಶ್ಯಪ್ ಮೂರು ಸ್ಥಾನ ಭಡ್ತಿ ಪಡೆದು 32ನೇ ಸ್ಥಾನಕ್ಕೇರಿದರು. ಶುಭಾಂಕರ್ ಡೇ 2 ಸ್ಥಾನ ಭಡ್ತಿ ಪಡೆದು 39ನೇ ಸ್ಥಾನ ತಲುಪಿದರು. ಒಲಿಂಪಿಕ್ಸ್‌ನಲ್ಲಿ ಪದಕ ವಿಜೇತೆ ಪಿ.ವಿ.ಸಿಂಧು ಹಾಗೂ ಸೈನಾ ನೆಹ್ವಾಲ್ ಮಹಿಳೆಯರ ಸಿಂಗಲ್ಸ್ ನ ರ್ಯಾಂಕಿಂಗ್‌ನಲ್ಲಿ ಕ್ರಮವಾಗಿ 5ನೇ ಹಾಗೂ 8ನೇ ಸ್ಥಾನದಲ್ಲಿ ಮುಂದುವರಿದಿದ್ದಾರೆ.

ಮಹಿಳೆಯರ ಡಬಲ್ಸ್‌ನಲ್ಲಿ ಅಶ್ವಿನಿ ಪೊನ್ನಪ್ಪ ಹಾಗೂ ಎನ್.ಸಿಕ್ಕಿ ರೆಡ್ಡಿ 23ನೇ ಸ್ಥಾನಕ್ಕೆ ಭಡ್ತಿ ಪಡೆದಿದ್ದಾರೆ. ಆದರೆ, ಮಿಶ್ರ ಡಬಲ್ಸ್ ರ್ಯಾಂಕಿಂಗ್‌ನಲ್ಲಿ ಭಾರತೀಯರು ಹಿನ್ನಡೆ ಕಂಡಿದ್ದಾರೆ.

ಪ್ರಣವ್ ಜೆರ್ರಿ ಚೋಪ್ರಾ ಹಾಗೂ ಸಿಕ್ಕಿ ರೆಡ್ಡಿ 23ನೇ ಸ್ಥಾನಕ್ಕೆ ಜಾರಿದ್ದಾರೆ. ಪೊನ್ನಪ್ಪ ಹಾಗೂ ರಾನಿಕ್‌ರೆಡ್ಡಿ ನಾಲ್ಕು ಸ್ಥಾನ ಕೆಳ ಜಾರಿ 27ನೇ ಸ್ಥಾನಕ್ಕಿಳಿದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News