ಭಾರತದ ಮುಖ್ಯ ಕೋಚ್ ಬದಲಾವಣೆಯಿಲ್ಲ
ಹೊಸದಿಲ್ಲಿ, ಆ.6: ಟೀಮ್ ಇಂಡಿಯಾದ ಮುಖ್ಯ ಕೋಚ್ ಆಗಿ ರವಿ ಶಾಸ್ತ್ರಿ ಮುಂದುವರಿಯುವ ಕುರಿತಂತೆ ಇದ್ದ ಎಲ್ಲ ಅನಿಶ್ಚಿತತೆ ದೂರವಾಗಿದೆ. ಶಾಸ್ತ್ರಿ ಅವರೇ ಕೋಚ್ ಆಗಿ ಮುಂದುವರಿಯಲಿದ್ದಾರೆ ಎಂದು ಕ್ರಿಕೆಟ್ ಸಲಹಾ ಸಮಿತಿ(ಸಿಎಸಿ)ಸದಸ್ಯರೊಬ್ಬರು ಸುಳಿವು ನೀಡಿದ್ದಾರೆ.
ಕಪಿಲ್‌ದೇವ್, ಅಂಶುಮಾನ್ ಗಾಯಕ್ವಾಡ್ ಹಾಗೂ ಶಾಂತಾ ರಂಗಸ್ವಾಮಿ ಅವರನ್ನೊಳಗೊಂಡ ಮೂವರು ಸದಸ್ಯರ ಕ್ರಿಕೆಟ್ ಸಲಹಾ ಸಮಿತಿಗೆ ನೂತನ ಕೋಚ್ ಆಯ್ಕೆ ಮಾಡುವ ಹೊಣೆಗಾರಿಕೆ ನೀಡಲಾಗಿದೆ.
‘‘ವಿದೇಶಿ ಕೋಚ್‌ನ್ನು ನೇಮಕಗೊಳಿಸುವ ಆಸಕ್ತಿ ನಮಗಿಲ್ಲ. ಗ್ಯಾರಿ ಕರ್ಸ್ಟನ್‌ರಂತಹ ಅಭ್ಯರ್ಥಿ ಅರ್ಜಿ ಸಲ್ಲಿಸಿದ್ದರೆ ಆ ಬಗ್ಗೆ ಯೋಚಿಸಬಹುದಿತ್ತು. ಭಾರತೀಯ ಅಭ್ಯರ್ಥಿಗಳು ನಮ್ಮ ಮೊದಲ ಆದ್ಯತೆಯಾಗಿದೆ. ಮುಖ್ಯ ಕೋಚ್ ನೇತೃತ್ವದಲ್ಲಿ ಭಾರತದ ಸಾಧನೆ ಉತ್ತಮವಾಗಿದೆ. ಶಾಸ್ತ್ರಿ ಹೊಸ ಗುತ್ತಿಗೆ ಪಡೆಯುವ ಫೇವರಿಟ್ ಆಗಿದ್ದಾರೆ’’ ಎಂದು ಸಿಎಸಿ ಸದಸ್ಯರೊಬ್ಬರು ಹೇಳಿದ್ದಾರೆ.
ತಂಡದ ಬದಲಾವಣೆಯ ಹಾದಿಯಲ್ಲಿರುವ ಕಾರಣ ಶಾಸ್ತ್ರಿ ಕೋಚ್ ಆಗಿ ಮುಂದುವರಿಯುವುದು ಮುಖ್ಯವಾಗಿದೆ ಎಂದು ಇತ್ತೀಚೆಗೆ ಹಿರಿಯ ಬಿಸಿಸಿಐ ಅಧಿಕಾರಿಯೊಬ್ಬರು ಅಭಿಪ್ರಾಯಪಟ್ಟಿದ್ದರು.
‘‘ತಂಡದಲ್ಲಿ ಬದಲಾವಣೆ ಆಗುತ್ತಿರುವ ಈ ಕಾಲಘಟ್ಟದಲ್ಲಿ ದೀರ್ಘಾವಧಿಯ ಕೋಚ್ ಅತ್ಯಂತ ಮುಖ್ಯ. ಶಾಸ್ತ್ರಿ ಹಾಗೂ ಕೊಹ್ಲಿ ಅವರು ಪರಸ್ಪರ ಹೊಂದಾಣಿಕೆಯಿಂದ ಕೆಲಸ ಮಾಡುತ್ತಿದ್ದಾರೆ. ಕೋಚ್ ಬದಲಾವಣೆಯಿಂದ ತಂಡದ ಸಮೀಕರಣದ ಮೇಲೆ ಪರಿಣಾಮಬೀರುತ್ತದೆ. ಈ ಹಂತದಲ್ಲಿ ಬದಲಾವಣೆ ಮಾಡಿದರೆ, ಮುಂದಿನ 5 ವರ್ಷಗಳ ಕಾಲ ರಣತಂತ್ರ ಹಾಗೂ ಯೋಜನೆಯನ್ನು ಬದಲಿಸಬೇಕಾಗುತ್ತದೆ’’ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ಹೇಳಿದ್ದಾರೆ.
‘‘ಸಿಎಸಿ ತೀರ್ಮಾನವೇ ಅಂತಿಮ. ಆ ಸಮಿತಿಯು ಕೋಚ್‌ನ್ನು ಆಯ್ಕೆ ಮಾಡುತ್ತದೆ. ಬಿಸಿಸಿಐಗೆ ಶಿಫಾರಸುಗಳನ್ನು ನೀಡುವ ಪ್ರಮೇಯವಿಲ್ಲ ’’ ಎಂದು ಸಿಒಎ ಮುಖ್ಯಸ್ಥ ವಿನೋದ್ ರಾಯ್ ಸ್ಪಷ್ಟಪಡಿಸಿದ್ದಾರೆ.