ತೀಸ್ತಾ ಸೆಟಲ್ವಾಡ್ ವಿರುದ್ಧ ದಾಖಲಾಗಿದ್ದ ಎರಡು ಎಫ್‍ಐಆರ್ ರದ್ದುಗೊಳಿಸಿದ ಹೈಕೋರ್ಟ್

Update: 2019-08-08 07:34 GMT

ಅಹ್ಮದಾಬಾದ್, ಆ.8: ಹಿಂದುಗಳ ದೇವತೆ ಕಾಳಿ ಹಾಗೂ ಐಸಿಸ್ ಉಗ್ರರ ನಡುವೆ ಸಾಮ್ಯತೆ ಕಲ್ಪಿಸುವ ಚಿತ್ರವೊಂದನ್ನು ಟ್ವೀಟ್ ಮಾಡಿದ ಆರೋಪದಲ್ಲಿ ಸಾಮಾಜಿಕ ಹೋರಾಟಗಾರ್ತಿ ತೀಸ್ತಾ ಸೆಟಲ್ವಾಡ್ ಅವರ ವಿರುದ್ಧ ಸುಮಾರು ಐದು ವರ್ಷಗಳ ಹಿಂದೆ  ದಾಖಲಾಗಿದ್ದ ಎರಡು ಎಫ್‍ಐಆರ್ ಗಳನ್ನು ಗುಜರಾತ್ ಹೈಕೋರ್ಟ್ ಬುಧವಾರ ರದ್ದುಗೊಳಿಸಿದೆ.

ಅಹ್ಮದಾಬಾದ್ ನ ಘಟ್ಲೋಡಿಯಾ ಪೊಲೀಸ್ ಠಾಣೆಯಲ್ಲಿ ಆಗಸ್ಟ್ 2014ರಲ್ಲಿ ಅವರ ವಿರುದ್ಧ  ವಿಶ್ವ ಹಿಂದೂ ಪರಿಷದ್ ಕಾರ್ಯಕರ್ತ ರಾಜು ಪಟೇಲ್ ದಾಖಲಿಸಿದ್ದ ದೂರಿನನ್ವಯ ಎಫ್‍ಐಆರ್ ದಾಖಲಾಗಿತ್ತು. ಇನ್ನೊಂದು ದೂರನ್ನು  ಭಾವ್ನಗರದ ಸಿ ಡಿವಿಷನ್ ಪೊಲೀಸ್ ಠಾಣೆಯಲ್ಲಿ ಕಿರಿಟ್ ಮಿಸ್ತ್ರಿ ಎಂಬವರು ದಾಖಲಿಸಿದ್ದರು.

ಹತ್ಯೆಗೀಡಾದ ಅಮೆರಿಕಾದ  ಪತ್ರಕರ್ತ ಜೇಮ್ಸ್ ಫೋಲಿ ಜತೆಗಿರುವ ಫೋಟೋದಲ್ಲಿ ಕಾಳಿ ದೇವತೆ ಹಾಗೂ ಐಸಿಸ್ ಉಗ್ರರ ನಡುವೆ ಹೋಲಿಕೆ ಕಲ್ಪಿಸುವ ಫೋಟೋಶಾಪ್ ಮಾಡಲ್ಪಟ್ಟ ಚಿತ್ರವನ್ನು ಟ್ವೀಟ್ ಮಾಡಿದ್ದ ಸೆಟಲ್ವಾಡ್ ನಂತರ ಕ್ಷಮೆ ಯಾಚಿಸಿದ್ದರು.

ಅವರ ಟ್ವೀಟ್ ಹಿಂದೆ ಯಾವುದೇ ದುರುದ್ದೇಶ ಹಾಗೂ ಯಾರನ್ನೂ ನೋವುಂಟು ಮಾಡುವ ಉದ್ದೇಶವಿಲ್ಲವೆಂಬ ಕಾರಣ ಎಫ್‍ಐಅರ್ ಗಳನ್ನು ರದ್ದುಪಡಿಸಲಾಗಿದೆ. ಈ ಎರಡೂ ಎಫ್‍ಐಆರ್ ಗಳನ್ನು ರದ್ದುಗೊಳಿಸುವಂತೆ ಕೋರಿ ತೀಸ್ತಾ ಅವರು ಎರಡು ಅಪೀಲು ಸಲ್ಲಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News