2024ರ ಚುನಾವಣೆಯಲ್ಲಿ ನನ್ನ ಹೆಸರನ್ನು ಅವಲಂಬಿಸಬೇಡಿ: ನೂತನ ಸಂಸದರಿಗೆ ಪ್ರಧಾನಿ ಕಿವಿಮಾತು

Update: 2019-08-10 08:21 GMT

ಹೊಸದಿಲ್ಲಿ, ಆ.10: “ಮುಂದಿನ ಲೋಕಸಭಾ ಚುನಾವಣೆ 2024ರಲ್ಲಿ ನಡೆಯುವಾಗ ಅದನ್ನು ಗೆಲ್ಲಲು ನನ್ನ ಹೆಸರು ಅಥವಾ ಸಾಧನೆಗಳನ್ನು ಅವಲಂಬಿಸದೇ ಇರುವಂತಾಗಲು  ಶ್ರಮ ವಹಿಸಿ. ನಿಮ್ಮ ಕ್ಷೇತ್ರಗಳನ್ನು ಅಭಿವೃದ್ಧಿ ಪಡಿಸಿ'' ಎಂದು ಪ್ರಧಾನಿ ನರೇಂದ್ರ ಮೋದಿ ಬಿಜೆಪಿಯ ನೂತನ ಸಂಸದರಿಗಾಗಿ ನಡೆದ ಕಾರ್ಯಾಗಾರದಲ್ಲಿ  ಕರೆ ನೀಡಿರುವ ಬಗ್ಗೆ ಮೊದಲ ಬಾರಿ ಸಂಸದರಾಗಿ ಆಯ್ಕೆಯಾಗಿರುವ ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್  ಹೇಳಿಕೊಂಡಿದ್ದಾರೆ.

ಕಾರ್ಯಾಗಾರದಲ್ಲಿನ ಅನುಭವಗಳ ಕುರಿತಂತೆ ಬರೆದಿರುವ ಗಂಭೀರ್, ಪ್ರಧಾನಿ ಸಭೆಯಲ್ಲಿ ಸಕಾರಾತ್ಮಕತೆಯತ್ತ ಗಮನ ಕೇಂದ್ರೀಕರಿಸುವಂತೆ ಹಾಗೂ ಭಾರತದ ಸಾಂಸ್ಕೃತಿಕ ಹಾಗೂ ಮಾನವ ಸಂಪನ್ಮೂಲಗಳ ಸಮರ್ಪಕ ಬಳಕೆಯೊಂದಿಗೆ ದೇಶವನ್ನು ಮಹಾನ್ ಆಗಿಸಬೇಕೆಂದೂ ಕರೆ ನೀಡದರೆಂದು ವಿವರಿಸಿದ್ದಾರೆ.

ಕಾರ್ಯಾಗಾರದಲ್ಲಿ ಪ್ರಧಾನಿ ವೇದಿಕೆಯಿಂದ ಕೆಳಗಿಳಿದು ಸಂಸದರ ನಡುವೆ ಕುಳಿತುಕೊಂಡು ಎಲ್ಲರನ್ನೂ ಅಚ್ಚರಿಗೊಳಿಸಿದರಲ್ಲದೆ, ಈ ಮೂಲಕ ಸಂಸದರು ತಮ್ಮ ಹಾಗೂ ಜನರ ನಡುವೆ ಯಾವುದೇ ಅಡ್ಡಗೋಡೆಗಳಿರದೇ ಇರುವಂತೆ ನೋಡಿಕೊಳ್ಳಬೇಕೆಂಬ ಸಂದೇಶವನ್ನು ಪರೋಕ್ಷವಾಗಿ ನೀಡಿದ್ದಾರೆಂದು ಬರೆದಿರುವ ಗಂಭೀರ್, `ಕುಶಲ ಸಂಸದ'ರಾಗುವುದು ಹೇಗೆಂಬ ಬಗ್ಗೆಯೂ ಪ್ರಧಾನಿ ಈ ಸಂದರ್ಭ ವಿವರಿಸಿದರು ಎಂದು ತಿಳಿಸಿದ್ದಾರೆ.

ವೈಯಕ್ತಿಕ ಪ್ರತಿಷ್ಠೆಗಾಗಿ ಕಾರ್ಯನಿರ್ವಹಿಸುವ ಬದಲು ಟೀಂ ವರ್ಕ್ ಅಗತ್ಯವನ್ನು ಪ್ರಧಾನಿ ಒತ್ತಿ ಹೇಳಿದರಲ್ಲದೆ, ಸಂಸದರು ತಮ್ಮ ಕೆಲಸ ಕಾರ್ಯಗಳ ನಡುವೆ ತಮ್ಮ ಆರೋಗ್ಯ ಹಾಗೂ ತಮ್ಮ ಕುಟುಂಬದ ಕಡೆಗೆ ತಮಗಿರುವ ಜವಾಬ್ದಾರಿಯನ್ನು ನಿರ್ಲಕ್ಷ್ಯಿಸಬಾರದೆಂದೂ ಕಿವಿ ಮಾತು ಹೇಳಿದರೆಂದು ಗಂಭೀರ್ ವಿವರಿಸಿದ್ದಾರೆ.

ಊಟದ ಸಮಯ ಚಪಾತಿಯ ತಟ್ಟೆಯನ್ನು ಕೈಗೆತ್ತಿಕೊಂಡು ಎಲ್ಲರಿಗೂ ಪ್ರಧಾನಿ ತಾವೇ ಬಡಿಸಿದಾಗ ಸಂಸದರೆಲ್ಲರೂ ಮೂಕವಿಸ್ಮಿತರಾದರೆಂದೂ ಗಂಭೀರ್ ಬರೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News