370ನೇ ವಿಧಿ ರದ್ದತಿ ವಿರುದ್ಧ ಖಂಡನಾ ಪತ್ರಕ್ಕೆ ಕಾಶ್ಮೀರಿ ಪಂಡಿತರು, ಸಿಖ್ಖರ ಸಹಿ

Update: 2019-08-10 17:03 GMT

ಹೊಸದಿಲ್ಲಿ, ಆ.10: ದಬ್ಬಾಳಿಕೆಯ ಕ್ರಮದಿಂದ, ರಹಸ್ಯವಾಗಿ ಸಂವಿಧಾನದ 370ನೇ ವಿಧಿಯನ್ನು ರದ್ದುಗೊಳಿಸಿರುವುದು ಅಸಾಂವಿಧಾನಿಕ ಕ್ರಮವಾಗಿದೆ ಮತ್ತು ಕಾಶ್ಮೀರದ ಜನತೆಗೆ ನೀಡಿರುವ ಐತಿಹಾಸಿಕ ಭರವಸೆಗಳ ಉಲ್ಲಂಘನೆಯಾಗಿದೆ ಎಂದು ಕಾಶ್ಮೀರದ 64 ನಾಗರಿಕರು ಸಹಿ ಹಾಕಿದ ಪತ್ರದಲ್ಲಿ ತಿಳಿಸಲಾಗಿದೆ.

 ಈ ಪತ್ರಕ್ಕೆ ಸಹಿ ಹಾಕಿದವರಲ್ಲಿ ವೈದ್ಯರು, ವೈಸ್ ಏರ್‌ಮಾರ್ಶಲ್, ರಂಗಭೂಮಿ ಕಲಾವಿದರು, ಶಿಕ್ಷಣ ತಜ್ಞರು, ಪತ್ರಕರ್ತರು, ವಿದ್ಯಾರ್ಥಿಗಳು ಹಾಗೂ ಸಂಶೋಧಕರು ಸೇರಿದ್ದಾರೆ. ಇವರಲ್ಲಿ ಹೆಚ್ಚಿನವರು ಸಿಖ್, ಕಾಶ್ಮೀರಿ ಪಂಡಿತ ಹಾಗೂ ದೋಗ್ರಾ ಸಮುದಾಯದವರಾಗಿದ್ದಾರೆ. ಈ ಹಿಂದಿನ ಜಮ್ಮು ಮತ್ತು ಕಾಶ್ಮೀರ ರಾಜ್ಯದವರಾಗಿದ್ದ, ಈಗ ರಾಜ್ಯವೇ ಇಲ್ಲದ ಪ್ರದೇಶದ ವಾಸಿಗಳಾಗಿರುವ ನಾವು ಸಂವಿಧಾನದ 370ನೇ ವಿಧಿಯನ್ನು ರದ್ದುಗೊಳಿಸಿರುವುದನ್ನು ಖಂಡಿಸುತ್ತೇವೆ ಎಂದು ಪತ್ರದಲ್ಲಿ ಹೇಳಲಾಗಿದೆ.

ಜಮ್ಮು ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದುಗೊಳಿಸಿ ಅದನ್ನು 2 ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜಿಸಲು ಕೇಂದ್ರ ಸರಕಾರ ಕೈಗೊಂಡ ರಹಸ್ಯ ಕ್ರಮವು ರಾಜ್ಯದ ವಿಧಾನಸಭೆಯ ಅಭಿಪ್ರಾಯ ಮತ್ತು ಸಮ್ಮತಿಯ ನಿರಾಕರಣೆಯಾಗಿದ್ದು, ಸರ್ವಾಧಿಕಾರಿ ಮತ್ತು ಪ್ರಜಾಪ್ರಭುತ್ವ ವಿರೋಧಿ ನಡೆಯಾಗಿದೆ ಎಂದು ಪತ್ರದಲ್ಲಿ ಹೇಳಲಾಗಿದೆ. ರಾಜ್ಯದ ಜನತೆಯ ಅಭಿಪ್ರಾಯ ಕೇಳದೆ ಮಾಡಿರುವ ಈ ಪ್ರಕ್ರಿಯೆಯನ್ನು ನ್ಯಾಯಸಮ್ಮತ ಎಂದು ಸರಕಾರ ಹೇಳಿರಬಹುದು. ಆದರೆ ನಮ್ಮ ಮೇಲೆ ಹೇರಲಾಗಿರುವ ಏಕಪಕ್ಷೀಯ, ಪ್ರಜಾಪ್ರಭುತ್ವಕ್ಕೆ ವಿರುದ್ಧವಾದ ಹಾಗೂ ಅಸಾಂವಿಧಾನಿಕ ನಿರ್ಧಾರವನ್ನು ನಾವು ಖಂಡಿಸುತ್ತೇವೆ. ರಾಜ್ಯದ ಮೇಲಿರುವ ಮುತ್ತಿಗೆಯ ಸ್ಥಿತಿಯನ್ನು ತಕ್ಷಣ ಹಿಂಪಡೆದು, ರಾಜ್ಯದ ಜನತೆಯ ಸಂವಹನಕ್ಕೆ ಒಡ್ಡಿರುವ ನಿಷೇಧವನ್ನು ತೆರವುಗೊಳಿಸಿ, ರಾಜಕೀಯ ಪ್ರತಿನಿಧಿಗಳನ್ನು ಅಕ್ರಮ ಬಂಧನದಿಂದ ಬಿಡುಗಡೆಗೊಳಿಸಬೇಕು ಎಂದು ಪತ್ರದಲ್ಲಿ ಆಗ್ರಹಿಸಲಾಗಿದೆ.

ನಮ್ಮ ತಾಯ್ನಾಡನ್ನು ವಿಭಜಿಸಿರುವುದು ನಮಗೆ ನೋವುಂಟುಮಾಡಿದ್ದು, ಈ ನಿರ್ಣಾಯಕ ಮತ್ತು ಸಂದಿಗ್ಧ ಪರಿಸ್ಥಿತಿಯಲ್ಲಿ ನಾವೆಲ್ಲಾ ಒಗ್ಗೂಡಿ ಇರುತ್ತೇವೆ. ನಮ್ಮನ್ನು ಜನಾಂಗೀಯ, ಸಾಂಸ್ಕೃತಿಕ ಮತ್ತು ಕೋಮುವಾರು ನೆಲೆಯಲ್ಲಿ ವಿಭಜಿಸುವ ಎಲ್ಲಾ ಪ್ರಯತ್ನಗಳನ್ನೂ ತಡೆಯುತ್ತೇವೆ ಎಂದು ಪತ್ರದಲ್ಲಿ ಹೇಳಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News